
ಕೆವಿಜಿ ದಂತಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿನಿ ಮೇಲೆ ರ‍್ಯಾಗಿಂಗ್ ನಡೆದ ಸುದ್ದಿ ಸತ್ಯಕ್ಕೆ ದೂರವಾಗಿದ್ದು ಇಂತಹ ಘಟನೆ ಈ ಹಿಂದೆಯೂ ನಮ್ಮ ಕಾಲೇಜಿನಲ್ಲಿ ನಡೆದೇ ಇಲ್ಲ, ಮತ್ತು ನಮ್ಮ ಕಾಲೇಜಿನಲ್ಲಿ ಜಾತಿನಿಂದನೆ ಮೊದಲಾದ ಘಟನೆಗಳು ನಡೆದೇ ಇಲ್ಲ, ಇದುವರೆಗೂ ನಮ್ಮ ಕಾಲೇಜು ಆಡಳಿತ ಮಂಡಳಿ ಆಗಿರಬಹುದು ಅದ್ಯಾಪಕರಿಗೆ ಆಗಿರಬಹುದು ಯಾವುದೇ ದೂರು ಬಂದಿಲ್ಲ ಎಂದು ದಂತ ಮಹಾವಿದ್ಯಾಲಯದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿರುವ ಆಡಳಿತ ಮಂಡಳಿ ಇದು ವಿದ್ಯಾರ್ಥಿನಿಯ ಸ್ವಯಂ ಹೇಳಿಕೆ ಎಂದು ತಿಳಿಸಿದೆ. ಮತ್ತು ಈ ಕೆಳಗಿನ ಹೇಳಿಕೆ ಮುಖಾಂತರ ಘಟನೆಯ ಸಂಪೂರ್ಣ ವಿವರ ತಿಳಿಸಿದೆ.
ಮಾದ್ಯಮಗಳು ಮತ್ತು ಪತ್ರಿಕಾ ವರದಿಗಳು ಇಲ್ಲಿಯವರೆಗೆ ಪ್ರಚಾರ ಪಡೆದಿರುವ ವಿಚಾರಗಳು ಸತ್ಯಕ್ಕೆ ದೂರವಾಗಿದ್ದು, ಈ ಬಗ್ಗೆ ಸತ್ಯಾ ಸತ್ಯತೆಗಳನ್ನು ಈ ಮೂಲಕ ಪೂರಕ ದಾಖಲೆಗಳೊಂದಿಗೆ ನೀಡುತ್ತಿದ್ದೇವೆ.ಡಾ| ಪಲ್ಲವಿ ಎನ್.ಪಿ. ನಮ್ಮ ಸಂಸ್ಥೆಯ 3ನೇ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿನಿಯಾಗಿದ್ದು, ಮೂಲತ: ಬೆಂಗಳೂರಿನ ವೈಟ್‌ಫೀಲ್ಡ್ ನವರಾಗಿರುತ್ತಾರೆ. ಡಾ| ಪಲ್ಲವಿಯವರು ನಮ್ಮದೇ ಕೆ.ವಿ.ಜಿ. ದಂತ ಮಹಾವಿದ್ಯಾಲಯದ ವಿದ್ಯಾರ್ಥಿನಿ ನಿಲಯದಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಇತರ ವಿದ್ಯಾರ್ಥಿನಿಯರೊಂದಿಗೆ ವಾಸ್ತವ್ಯ ಮಾಡಿರುತ್ತಾರೆ.
ಮೊನ್ನೆ ದಿನಾಂಕ 21.12.2022ನೇ ಬುಧವಾರ ರಾತ್ರಿ ಸುಮಾರು 10 ಗಂಟೆಗೆ ಅವರ ಅಣ್ಣನವರೊಂದಿಗೆ ಊಟಕ್ಕಾಗಿ ಹೊರಗಡೆ ಹೋಗಿ ಹಿಂತಿರುಗುವ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅವರ ಸಹಪಾಠಿಗಳಾದ ಡಾ| ವೈಶಾಖ್, ಜೆ. ಪಣಿಕರ್ ಮತ್ತು ಸಂಗಡಿಗರು ನನ್ನ ಮೇಲೆ ಹಲ್ಲೆ ಮಾಡಿರುತ್ತಾರೆ ಎಂಬುದಾಗಿ ಅಂದಾಜು ರಾತ್ರಿ 10.30 ರ ಹೊತ್ತಿಗೆ ದೂರವಾಣಿ ಮೂಲಕ ಪ್ರಾಂಶುಪಾಲರಿಗೆ ತಿಳಿಸಿರುತ್ತಾರೆ. ಆದರೆ ಆ ಮೊದಲು ಅವರ ಮೇಲೆ ಮಾದ್ಯಮಗಳಲ್ಲಿ ಚಿತ್ರಿಸಿರುವಂತೆ 6 ತಿಂಗಳಿಂದ ರ‍್ಯಾಗಿಂಗ್ ನಡೆದಿರುತ್ತದೆ ಎಂಬ ಬಗ್ಗೆ ಪ್ರಾಂಶುಪಾಲರಿಗಾಗಲಿ,ಸಂಬಂಧಪಟ್ಟ ಅಧ್ಯಾಪಕರಿಗಾಗಲಿ, ಆಡಳಿತ ಮಂಡಳಿಗಾಗಲಿ ಯಾವುದೇ ರೀತಿಯ ದೂರುಗಳು ಬಂದಿರುವುದಿಲ್ಲ. ಆದರೆ ಆ ದಿನ ನಡೆದ ಘಟನೆ ಬಗ್ಗೆ ಪೊಲೀಸ್ ಠಾಣೆಗೆ ದೂರು ದಾಖಲಾಗಿದ್ದು, ಆ ಬಗ್ಗೆ ಎಫ್‌ಐಆರ್ ಕೂಡಾ ದಾಖಲಾಗಿರುತ್ತದೆ.ಡಾ| ಪಲ್ಲವಿ ಎನ್. ಪಿ. ಹೇಳಿಕೊಂಡಂತೆ ನಮ್ಮ ಸಂಸ್ಥೆಯಲ್ಲಿ ಯಾವುದೇ ಪ್ರಾದ್ಯಾಪಕರಾಗಲೀ, ವಿದ್ಯಾರ್ಥಿಗಳಾಗಲೀ ಜಾತಿ ನಿಂದನೆ ಮಾಡಿ ಅವರಿಗೆ ಹಿಂಸೆ ಕೊಟ್ಟಿರುವುದಿಲ್ಲ. ಇದೊಂದು ಸ್ವಯಂ ಹೇಳಿಕೆಯಾಗಿದ್ದು,ಇದು ಸತ್ಯಕ್ಕೆ ದೂರವಾಗಿರುತ್ತದೆ ನಮ್ಮ ಕೆ.ವಿ.ಜಿ. ದಂತ ಮಹಾವಿದ್ಯಾಲಯದಲ್ಲಿ ಇಲ್ಲಿಯವರೆಗೆ ಇಂತಹ ರ‍್ಯಾಗಿಂಗ್ ಆಗಲಿ, ವಿದ್ಯಾರ್ಥಿಗಳ ಮೇಲೆ ಯಾವುದೇ ಕಿರುಕುಳಗಳಾಗಲಿ,ಜಾತಿನಿಂದನೆ ನಡೆದ ದಾಖಲೆಗಳಿಲ್ಲ. ಈ ಬಗ್ಗೆ ಖಂಡಿತವಾಗಿಯೂ ತಾವುಗಳು ಪರಿಶೀಲಿಸಬಹುದು. ಆದರೆ ಇಂತಹ ಯಾವುದೇ ಘಟನೆಗಳು ನಡೆದ ಬಗ್ಗೆ ಆಡಳಿತ ಮಂಡಳಿಯವರ ತಿಳುವಳಿಕೆಗೆ ಬಂದಿರುವುದಿಲ್ಲ.ಮೊನ್ನೆ ನಡೆದ ಘಟನೆಯ ಬಗ್ಗೆ ಸಂಸ್ಥೆಯ ಪ್ರಾಂಶುಪಾಲರು ಕೂಡಲೇ ಕಾಲೇಜಿನ ವಿಭಾಗ ಮುಖ್ಯಸ್ಥರು ಹಾಗೂ ಹಿರಿಯ ಪ್ರಾಧ್ಯಾಪಕರುಗಳನ್ನು ಸಭೆ ಕರೆದು, ಡಾ| ದಯಾಕರ ಎಂ.ಎಂ. ಅವರ ನೇತೃತ್ವದಲ್ಲಿ 6 ಜನರನ್ನೊಳಗೊಂಡ ಸದಸ್ಯರ ಸಮಿತಿಯನ್ನು ರಚಿಸಲಾಗಿ ಕೂಲಂಕುಷವಾಗಿ ತನಿಖೆ ನಡೆಸುವರೇ, ಡಾ| ಪಲ್ಲವಿ ಎನ್.ಪಿ., ಡಾ| ವೈಶಾಖ್ ಜಿ. ಪಣಿಕರ್, ಡಾ| ಹನೀಶ್ ಕಿರಣ್ ರವರನ್ನು ತಾತ್ಕಾಲಿಕವಾಗಿ ಒಂದು ವಾರಗಳಿಗೆ
ಕಾಲೇಜಿನಿಂದ ಅಮಾನತು ಮಾಡಿ, ಮೇಲ್ಕಂಡ ಸಮಿತಿಯ ಮುಂದೆ ವಿಚಾರಣೆಗೆ ಹಾಜರಾಗುವಂತೆ ವಿದ್ಯಾರ್ಥಿಗಳಿಗೆ ತಿಳಿಸಲಾಗಿತ್ತು. ವಿಚಾರಣಾ
ಸಮಿತಿಯ ಮುಂದೆ ಡಾ| ವೈಶಾಖ್ ಜೆ. ಪಣಿಕರ್, ಡಾ| ಹನೀಶ್ ಕಿರಣ್ ಹಾಜರಾಗಿ ತಮ್ಮ ಹೇಳಿಕೆಯನ್ನು ನೀಡಿರುತ್ತಾರೆ. ಆ ಸಂದರ್ಭದಲ್ಲಿ
ಡಾ| ವೈಶಾಖ್ ಜೆ. ಪಣಿಕರ್ ರವರಿಗೆ ತಲೆಗೆ ಗಾಯಗಳಾಗಿದ್ದು, ಚಿಕಿತ್ಸೆಗೆ ಸಂಬಂಧಪಟ್ಟ ಮತ್ತು ಗಾಯದ ಹೊಲಿಗೆಗೆ ಸಂಬಂಧಪಟ್ಟ ಎಲ್ಲಾ
ದಾಖಲೆಗಳು ಮತ್ತು ಛಾಯಾಚಿತ್ರಗಳನ್ನು ಸಲ್ಲಿಸಿರುತ್ತಾರೆ. ಆದರೆ ಡಾ| ಪಲ್ಲವಿಯವರು ವೈದ್ಯಕೀಯ ಕಾರಣ ನೀಡಿ ವಿಚಾರಣಾ ಸಮಿತಿಯ ಮುಂದೆ ಹಾಜರಾಗಿರುವುದಿಲ್ಲ. ಆದರೆ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಸೂಕ್ತ ದಾಖಲೆಗಳನ್ನು ಇಲ್ಲಿಯವರೆಗೆ ನಮಗೆ ಸಲ್ಲಿಸಿರುವುದಿಲ್ಲ. ಈ ಬಗ್ಗೆ ವಿಚಾರಣಾ ಸಮಿತಿಯ ಪ್ರಾಥಮಿಕ ವರದಿಯನ್ನು ಇದರೊಂದಿಗೆ ಲಗೀಕರಿಸಿರುತ್ತೇವೆ.ಈ ಮಧ್ಯೆ ದಿನಾಂಕ 27.12.2022 ರಂದು ಡಾ| ಪಲ್ಲವಿಯವರು ನಮ್ಮ ಕೆ.ವಿ.ಜಿ. ದಂತ ಮಹಾವಿದ್ಯಾಲಯದ ವಸತಿ ನಿಲಯಕ್ಕೆ ಆಗಮಿಸಿ ತನ್ನ ಪೋಷಕರು ಹಾಗೂ ಇತರರೊಂದಿಗೆ ಬಂದು ತಮ್ಮ ಬಟ್ಟೆಬರೆಗಳನ್ನು ಕೊಂಡು ಹೋಗಿರುತ್ತಾರೆ ಎಂದು ವಿದ್ಯಾಸಂಸ್ಥೆಯ ಪರವಾಗಿ ಕೆವಿಜಿ ದಂತಮಹಾವಿದ್ಯಾಲಯದ,ಪ್ರಾಂಶುಪಾಲರು
ಕೆವಿಜಿ ದಂತಮಹಾವಿದ್ಯಾಲಯದ ಓರ್ಥೋಡೋಂಟಿಕ್ಸ್ ವಿಭಾಗ ಮುಖ್ಯಸ್ಥರು,ಕೆವಿಜಿ ದಂತಮಹಾವಿದ್ಯಾಲಯ ಓರಲ್ ಸರ್ಜರಿ ವಿಭಾಗ ಮುಖ್ಯಸ್ಥರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

