​ತಮಿಳುನಾಡಿಗೆ 6,000 ಕ್ಯೂಸೆಕ್ಸ್ ನೀರು: CWRC ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಾಧ್ಯತೆ – ಸಚಿವ ಚಲುವರಾಯಸ್ವಾಮಿ

​ತಮಿಳುನಾಡಿಗೆ 6,000 ಕ್ಯೂಸೆಕ್ಸ್ ನೀರು: CWRC ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಾಧ್ಯತೆ – ಸಚಿವ ಚಲುವರಾಯಸ್ವಾಮಿ

​ಬೆಂಗಳೂರು: ತಮಿಳುನಾಡಿಗೆ ದಿನಂಪ್ರತಿ 6,000 ಕ್ಯೂಸೆಕ್ಸ್ ಕಾವೇರಿ ನೀರನ್ನು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿರುವ ಆದೇಶದ ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರುವುದು ಬಹುತೇಕ ಖಚಿತವಾಗಿದೆ. ರಾಜ್ಯದಲ್ಲಿ ನೀರಿನ ಒಳಹರಿವು ಗಣನೀಯವಾಗಿ ಕಡಿಮೆಯಾಗಿರುವುದರಿಂದ ನೀರು ಹರಿಸುವುದು ಕಷ್ಟಸಾಧ್ಯ ಎಂದು ಸಚಿವರಾದ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಬೆಂಗಳೂರಿನ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಕಾವೇರಿ ಜಲಾನಯನ ಪ್ರದೇಶದಲ್ಲಿ ಪ್ರಸ್ತುತ ಪರಿಸ್ಥಿತಿ ತೀರಾ ಸಂಕಷ್ಟದಲ್ಲಿದೆ. ರಾಜ್ಯದ ತಾಂತ್ರಿಕ ತಂಡ ಮತ್ತು ಅಧಿಕಾರಿಗಳ ಸತತ ಪ್ರಯತ್ನದಿಂದಾಗಿ ನೀರು ಬಿಡುಗಡೆ ಪ್ರಮಾಣವನ್ನು 3,000 ಕ್ಯೂಸೆಕ್ಸ್‌ಗೆ ಕಡಿಮೆ ಮಾಡಿಸಲು ಸಾಧ್ಯವಾಗಿದೆ. ತಮಿಳುನಾಡು ಆರಂಭದಲ್ಲಿ 17,000 ಕ್ಯೂಸೆಕ್ಸ್ ನೀರಿಗೆ ಬೇಡಿಕೆ ಇಟ್ಟಿತ್ತು.

ಒಳಹರಿವು ಕುಸಿತ, ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದು ಅನಿವಾರ್ಯ​”ಪ್ರಸ್ತುತ ರಾಜ್ಯದ ಜಲಾಶಯಗಳಿಗೆ ಬರುತ್ತಿರುವ ಒಳಹರಿವು ಕೇವಲ 3,800 ಕ್ಯೂಸೆಕ್ಸ್ ಮಾತ್ರ. ಕಳೆದ ಎರಡು ದಿನಗಳಿಂದ ಹವಾಮಾನದಲ್ಲೂ ತೀವ್ರ ಬದಲಾವಣೆಯಾಗಿದ್ದು, ತಾಪಮಾನ ಏರಿಕೆಯಾಗಿದೆ. ಮಾರ್ಚ್ ಅಥವಾ ಏಪ್ರಿಲ್ ತಿಂಗಳಿನಲ್ಲಿ ಕಂಡುಬರುವ ಪರಿಸ್ಥಿತಿ ಈಗಲೇ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ 6,000 ಕ್ಯೂಸೆಕ್ಸ್ ನೀರು ಹರಿಸುವುದು ಅಸಾಧ್ಯ” ಎಂದು ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು.

ಅಲ್ಲದೆ, “ಸಿಡಬ್ಲ್ಯೂಆರ್‌ಸಿ ಮತ್ತು ಸಿಡಬ್ಲ್ಯೂಎಂಎ ನಡಾವಳಿಗಳನ್ನು ಪರಿಶೀಲಿಸಿ, ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದೇವೆ. ಕಾನೂನು ತಜ್ಞರು ಹಾಗೂ ಹಿರಿಯ ವಕೀಲರೊಂದಿಗೆ ಚರ್ಚಿಸಿದ ನಂತರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಈ ಹಂತದಲ್ಲಿ ಮೇಲ್ಮನವಿ ಸಲ್ಲಿಸುವುದು ಅನಿವಾರ್ಯ ಎನಿಸುತ್ತಿದೆ” ಎಂದು ಅವರು ಹೇಳಿದರು.

ಕುಡಿಯುವ ನೀರಿಗೆ ಮೊದಲ ಆದ್ಯತೆ: ​ರಾಜ್ಯದ ಜಲಾಶಯಗಳಲ್ಲಿ ಲಭ್ಯವಿರುವ ನೀರನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಲಾಗುತ್ತಿದ್ದು, ಶೇಕಡಾ 50 ರಷ್ಟು ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ ಕಾಯ್ದಿರಿಸಲಾಗಿದೆ. ದನಕರುಗಳಿಗೆ ಹಾಗೂ ಸಾರ್ವಜನಿಕರಿಗೆ ಯಾವುದೇ ಕುಡಿಯುವ ನೀರಿನ ಅಭಾವ ಉಂಟಾಗದಂತೆ ಕೆರೆ-ಕಟ್ಟೆಗಳನ್ನು ತುಂಬಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.

ರಾಜಕೀಯ ರಾಜ್ಯ