ಭಾರತ ಯುವ ಫುಟ್ಬಾಲ್ ತಂಡವು ಐತಿಹಾಸಿಕ ಸಾಧನೆ ಮಾಡಿದೆ. ಭಾನುವಾರ ನಡೆದ ಎಎಫ್ಸಿ ಯು-20 ಏಷ್ಯನ್ ಕಪ್ ಅರ್ಹತಾ ಟೂರ್ನಿಯ ಗ್ರೂಪ್ ‘ಬಿ’ ಅಂತಿಮ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 3-0 ಗೋಲುಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಭಾರತ 20 ವರ್ಷಗಳ ನಂತರ ಪ್ರಮುಖ ಟೂರ್ನಿಗೆ ಅರ್ಹತೆ ಗಿಟ್ಟಿಸಿಕೊಂಡಿದೆ.

ಅರ್ಹತೆಯ ಹಾದಿ ಹೀಗಿತ್ತು? ಈ ಪಂದ್ಯದ ಗೆಲುವಿನೊಂದಿಗೆ ಭಾರತ ಗ್ರೂಪ್ ‘ಬಿ’ ಹಂತದಲ್ಲಿ ಆಡಿದ 3 ಪಂದ್ಯಗಳಿಂದ ಒಟ್ಟು 6 ಅಂಕಗಳನ್ನು ಕಲೆಹಾಕಿತು. ಸಿರಿಯಾ ವಿರುದ್ಧ ನಡೆದ ಇನ್ನೊಂದು ಪಂದ್ಯದಲ್ಲಿ ಆತಿಥೇಯ ಉಜ್ಬೇಕಿಸ್ತಾನ್ 3-0 ಅಂತರದಲ್ಲಿ ಗೆಲುವು ಸಾಧಿಸಿದ್ದರಿಂದ, ಭಾರತ ತನ್ನ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯಿತು.


ಎಂಟು ಗ್ರೂಪ್ಗಳ ಪೈಕಿ ಅತ್ಯುತ್ತಮ ಪ್ರದರ್ಶನ ನೀಡಿದ ಏಳು ರನ್ನರ್-ಅಪ್ ತಂಡಗಳಲ್ಲಿ ಒಂದಾಗಿ ಭಾರತ ಪ್ರಮುಖ ಟೂರ್ನಿಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಭಾರತ ಕೊನೆಯದಾಗಿ 2006 ರಲ್ಲಿ ಎಎಫ್ಸಿ ಯು-20 ಏಷ್ಯನ್ ಕಪ್ ಮುಖ್ಯ ಟೂರ್ನಿಯಲ್ಲಿ ಆಡಿತ್ತು.
ಮುಖ್ಯ ಟೂರ್ನಿಯು ಚೀನಾದಲ್ಲಿ ನಡೆಯಲಿದ್ದು, ಟೂರ್ನಿಯ ಟಾಪ್ 4 ತಂಡಗಳು FIFA U-20 ವಿಶ್ವಕಪ್ಗೆ ನೇರ ಅರ್ಹತೆ ಪಡೆಯಲಿವೆ.

