ಪರವಾನಗಿ ರಹಿತ ದಾಸ್ತಾನು ಮಳಿಗೆಗಳ ಮೇಲೆ ದಾಳಿ: 4 ಲಕ್ಷ ರೂ. ಮೌಲ್ಯದ ಔಷಧ ಜಪ್ತಿ ಮಾಡಿದ ಎಫ್‌ಡಿಎ

ಪರವಾನಗಿ ರಹಿತ ದಾಸ್ತಾನು ಮಳಿಗೆಗಳ ಮೇಲೆ ದಾಳಿ: 4 ಲಕ್ಷ ರೂ. ಮೌಲ್ಯದ ಔಷಧ ಜಪ್ತಿ ಮಾಡಿದ ಎಫ್‌ಡಿಎ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಹೊರವಲಯದ ಆನೇಕಲ್ ಹಾಗೂ ದೇವನಹಳ್ಳಿಯಲ್ಲಿ ಯಾವುದೇ ಕಾನೂನುಬದ್ಧ ಪರವಾನಗಿ ಇಲ್ಲದೆ ಅಕ್ರಮವಾಗಿ ಔಷಧಗಳನ್ನು ಸಂಗ್ರಹಿಸಿ ವಿತರಿಸುತ್ತಿದ್ದ ಇ-ಕಾಮರ್ಸ್ ದಾಸ್ತಾನು ಮಳಿಗೆಗಳ ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆ (FDA) ಅಧಿಕಾರಿಗಳು ಭಾನುವಾರ ಮಿಂಚಿನ ದಾಳಿ ನಡೆಸಿದ್ದಾರೆ. ಕಾರ್ಯಾಚರಣೆಯ ವೇಳೆಯಲ್ಲಿ ಅಂದಾಜು 4 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಅಕ್ರಮ ಹಾಗೂ ನಕಲಿ ಔಷಧಗಳ ಬೃಹತ್ ಸಂಗ್ರಹವನ್ನು ಜಪ್ತಿ ಮಾಡಲಾಗಿದೆ.

ಖಚಿತ ಮಾಹಿತಿ ಆಧರಿಸಿ ಔಷಧ ಜಾರಿ ವಿಭಾಗದ (Drugs Enforcement Wing) ಹಿರಿಯ ಅಧಿಕಾರಿಗಳ ತಂಡವು ಆನೇಕಲ್ ಮತ್ತು ದೇವನಹಳ್ಳಿಯ ಈ ಎರಡೂ ಕೇಂದ್ರಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದೆ. ಇ-ಕಾಮರ್ಸ್ ವೇದಿಕೆಗಳ ಹೆಸರಿನಲ್ಲಿ ನಿಯಮಬಾಹಿರವಾಗಿ ಔಷಧಗಳನ್ನು ದಾಸ್ತಾನು ಮಾಡಿ, ಸಾರ್ವಜನಿಕರಿಗೆ ಸರಬರಾಜು ಮಾಡಲಾಗುತ್ತಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿದೆ.

ದಾಳಿಯ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಎಫ್‌ಡಿಎ ಅಧಿಕಾರಿಗಳು, “ಅಕ್ರಮವಾಗಿ ಔಷಧ ಸಂಗ್ರಹಣೆ ಹಾಗೂ ವಿತರಣೆ ಮಾಡುತ್ತಿದ್ದ ಜಾಲದ ವಿರುದ್ಧ ಇದು ಸಕಾಲಿಕ ಹಾಗೂ ಸಂಯೋಜಿತ ಕಾರ್ಯಾಚರಣೆಯಾಗಿದೆ. ಸಾರ್ವಜನಿಕರ ಆರೋಗ್ಯದ ಜೊತೆ ಆಟವಾಡುವ ಇಂತಹ ಅಕ್ರಮ ಚಟುವಟಿಕೆಗಳ ವಿರುದ್ಧ ಇಲಾಖೆಯು ಕಟ್ಟುನಿಟ್ಟಿನ ಕಾನೂನು ಕ್ರಮ ಮುಂದುವರಿಸಲಿದೆ,” ಎಂದು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಯ್ದೆಯನ್ವಯ ಮುಂದಿನ ತನಿಖೆ ಪ್ರಗತಿಯಲ್ಲಿದೆ.

ಅಪರಾಧ ಆರೋಗ್ಯ ಮತ್ತು ಸೌಂದರ್ಯ ರಾಜ್ಯ