ದಕ್ಷಿಣ ಭಾರತದ ಖ್ಯಾತ ಹಿರಿಯ ನಟಿ ಆರ್. ಸುಕನ್ಯಾ ಅವರು ಸನ್ ಟಿವಿ ನೆಟ್ವರ್ಕ್ ಲಿಮಿಟೆಡ್ ವಿರುದ್ಧದ ಮಾನನಷ್ಟ ಮೊಕದ್ದಮೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ಸುಮಾರು ಮೂರು ದಶಕಗಳ (30 ವರ್ಷ) ಸುದೀರ್ಘ ಕಾನೂನು ಹೋರಾಟದ ನಂತರ, ಮದ್ರಾಸ್ ಹೈಕೋರ್ಟ್ ನಟಿಯ ಪರವಾಗಿ ತೀರ್ಪು ನೀಡಿದ್ದು, ಸನ್ ಟಿವಿಗೆ ತೀವ್ರ ಛೀಮಾರಿ ಹಾಕಿದೆ. ಅಲ್ಲದೆ, ನಟಿಗೆ ₹10.01 ಲಕ್ಷ (ನಿಖರವಾಗಿ ₹10,00,500) ಪರಿಹಾರ ಧನವನ್ನು ನೀಡಬೇಕು ಹಾಗೂ ಆ ವಿವಾದಾತ್ಮಕ ಸಂದರ್ಶನವನ್ನು ಶಾಶ್ವತವಾಗಿ ನಿಷೇಧಿಸಬೇಕು ಎಂಬ ಚೆನ್ನೈ ವಿಚಾರಣಾ ನ್ಯಾಯಾಲಯದ 2015ರ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.

ಈ ಮಹತ್ವದ ತೀರ್ಪನ್ನು ನ್ಯಾಯಮೂರ್ತಿ ಕೆ. ಕುಮರೇಶ್ ಬಾಬು ಅವರಿದ್ದ ಏಕಸದಸ್ಯ ಪೀಠ ಪ್ರಕಟಿಸಿದೆ. ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಮಾಧ್ಯಮಗಳ ಜವಾಬ್ದಾರಿಯ ಕುರಿತು ಪ್ರಮುಖ ಅವಲೋಕನವನ್ನು ಮಾಡಿದೆ. ಕುಖ್ಯಾತ ಕಾಡುಗಳ್ಳ ವೀರಪ್ಪನ್ನ ವಿವಾದಾತ್ಮಕ ಸಂದರ್ಶನವನ್ನು ಪ್ರಸಾರ ಮಾಡುವ ಮುನ್ನ, ಅದರಲ್ಲಿರುವ ಆಕ್ಷೇಪಾರ್ಹ ಹಾಗೂ ಮಾನಹಾನಿಕರ ಭಾಗಗಳನ್ನು ಸಂಪಾದಿಸುವ (ಎಡಿಟ್ ಮಾಡುವ) ಸಂಪೂರ್ಣ ಅಧಿಕಾರ ಮತ್ತು ಅವಕಾಶ ಸನ್ ಟಿವಿ ವಾಹಿನಿಗೆ ಇತ್ತು ಎಂದು ಕೋರ್ಟ್ ಹೇಳಿದೆ. ಆದರೆ, ವಾಹನಿಯು ಅದರಲ್ಲಿರುವ ಸುಳ್ಳು ಆರೋಪಗಳನ್ನು ದೃಢೀಕರಿಸಲು ಅಥವಾ ತೆಗೆದುಹಾಕಲು ಸಂಪೂರ್ಣವಾಗಿ ವಿಫಲವಾಗಿದ್ದರಿಂದಲೇ ನಟಿ ಸುಕನ್ಯಾ ಅವರು ಮಾನನಷ್ಟ ಮೊಕದ್ದಮೆ ಹೂಡಬೇಕಾಯಿತು ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.
ಈ ವಿವಾದವು 1996ರಲ್ಲಿ ಸನ್ ಟಿವಿಯಲ್ಲಿ ಪ್ರಸಾರವಾದ ವೀರಪ್ಪನ್ ಸಂದರ್ಶನದಿಂದ ಆರಂಭವಾಗಿತ್ತು. ಆ ಸಂದರ್ಶನದಲ್ಲಿ ವೀರಪ್ಪನ್ ನಟಿಯ ವೈಯಕ್ತಿಕ ಜೀವನದ ಬಗ್ಗೆ ಅತ್ಯಂತ ಅವಹೇಳನಕಾರಿ ಆರೋಪಗಳನ್ನು ಮಾಡಿದ್ದನು. ಇದರಿಂದ ತನ್ನ ಘನತೆಗೆ ತೀವ್ರ ಧಕ್ಕೆಯಾಗಿದೆ ಎಂದು ಸುಕನ್ಯಾ ನ್ಯಾಯಾಲಯದ ಮೆಟ್ಟಿಲೇರಿದ್ದರು. ಸದ್ಯ ಸನ್ ಟಿವಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿರುವ ಮದ್ರಾಸ್ ಹೈಕೋರ್ಟ್, ವಾಹಿನಿಯ ದುರುದ್ದೇಶವನ್ನು ತರಾಟೆಗೆ ತೆಗೆದುಕೊಂಡಿದೆ. ಯಾವುದೇ ಸಂದರ್ಶನವನ್ನು ಪ್ರಸಾರ ಮಾಡುವ ಮುನ್ನ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಪ್ರಸಾರಕರ ಕರ್ತವ್ಯ ಎಂಬುದನ್ನು ಸ್ಪಷ್ಟಪಡಿಸುವ ಮೂಲಕ, ಮೂರು ದಶಕಗಳ ನಂತರ ಹಿರಿಯ ನಟಿಗೆ ನ್ಯಾಯ ಒದಗಿಸಿದೆ.

