ಬೆಂಗಳೂರು: ರಾಜ್ಯಾದ್ಯಂತ ಆಟೋ ಎಲ್‌ಪಿಜಿ (Auto LPG) ಬೇಡಿಕೆ ದಿಢೀರ್ ಏರಿಕೆಯಾಗಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕ ವಲಯದ ತೈಲ ದೈತ್ಯ ಸಂಸ್ಥೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL) ತನ್ನ ಪೂರೈಕೆಯನ್ನು ಗಣನೀಯವಾಗಿ ಹೆಚ್ಚಿಸಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಹಲವು ಖಾಸಗಿ ಆಟೋ ಎಲ್‌ಪಿಜಿ ವಿತರಣಾ ಕೇಂದ್ರಗಳು ಸ್ಥಗಿತಗೊಂಡಿರುವ ನಡುವೆ ಈ ಕ್ರಮ ಕೈಗೊಳ್ಳಲಾಗಿದೆ.

ಕರ್ನಾಟಕದ ವಿವಿಧ ಭಾಗಗಳಲ್ಲಿ ಸುಮಾರು 300ಕ್ಕೂ ಹೆಚ್ಚು ಖಾಸಗಿ ಆಟೋ ಎಲ್‌ಪಿಜಿ ಕೇಂದ್ರಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟಿವೆ ಅಥವಾ ಭಾಗಶಃ ಕಾರ್ಯಾಚರಣೆ ನಡೆಸುತ್ತಿವೆ. ಇದರಿಂದಾಗಿ ಆಟೋ ರಿಕ್ಷಾ ಚಾಲಕರು ಮತ್ತು ಎಲ್‌ಪಿಜಿ ಚಾಲಿತ ಕಾರು ಮಾಲೀಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಈ ಹೊರೆಯನ್ನು ನಿಭಾಯಿಸಲು ಇಂಡಿಯನ್ ಆಯಿಲ್ ಈಗ ಸನ್ನದ್ಧವಾಗಿದೆ.
“ಬೇಡಿಕೆಯಲ್ಲಿನ ತೀವ್ರ ಏರಿಕೆಗೆ ಸ್ಪಂದಿಸಿ ಪೂರೈಕೆಯನ್ನು ವಿಸ್ತರಿಸಲಾಗಿದೆ,” ಎಂದು ಇಂಡಿಯನ್ ಆಯಿಲ್‌ನ ಮುಖ್ಯ ಮಹಾಪ್ರಬಂಧಕ (ಕಾರ್ಪೊರೇಟ್ ಕಮ್ಯುನಿಕೇಷನ್ಸ್) ವಿ. ವೆಟ್ರಿಸೆಲ್ವಕುಮಾರ್ ತಿಳಿಸಿದ್ದಾರೆ.
ಸಾರ್ವಜನಿಕರಿಗೆ ನಿರಾಳ
ಖಾಸಗಿ ಬಂಕ್‌ಗಳಲ್ಲಿ ಇಂಧನ ಸಿಗದೆ ಪರದಾಡುತ್ತಿದ್ದ ವಾಹನ ಸವಾರರಿಗೆ ಇಂಡಿಯನ್ ಆಯಿಲ್‌ನ ಈ ನಿರ್ಧಾರ ದೊಡ್ಡ ಆಶ್ವಾಸನೆ ನೀಡಿದೆ. ಸಾರಿಗೆ ವಲಯಕ್ಕೆ ಯಾವುದೇ ಅಡೆತಡೆಯಾಗದಂತೆ ಪೂರೈಕೆ ಸರಪಳಿಯನ್ನು ಬಲಪಡಿಸಲಾಗಿದೆ ಎಂದು ಸಂಸ್ಥೆ ಭರವಸೆ ನೀಡಿದೆ.

