IND vs PAK: ಕೊಲಂಬೊದಲ್ಲಿ ಪಾಕ್ ಗೆ ಭಾರತದ ಪಂಚ್: 61 ರನ್‌ಗಳ ಭರ್ಜರಿ ಜಯದೊಂದಿಗೆ ಸೂಪರ್-8ಕ್ಕೆ ಟೀಂ ಇಂಡಿಯಾ ಲಗ್ಗೆ!

IND vs PAK: ಕೊಲಂಬೊದಲ್ಲಿ ಪಾಕ್ ಗೆ ಭಾರತದ ಪಂಚ್: 61 ರನ್‌ಗಳ ಭರ್ಜರಿ ಜಯದೊಂದಿಗೆ ಸೂಪರ್-8ಕ್ಕೆ ಟೀಂ ಇಂಡಿಯಾ ಲಗ್ಗೆ!

ಕೊಲಂಬೊ: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಸವಾರ್ಂಗೀಣ ಪ್ರದರ್ಶನ ನೀಡಿ 61 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಶ್ರೀಲಂಕಾದ ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಟಿ20 ವಿಶ್ವಕಪ್ 2026ರ ಗುಂಪು ಹಂತದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ಪಾಕ್ ತಂಡವನ್ನು ಧೂಳೀಪಟ ಮಾಡಿದೆ.


ಇಶಾನ್ ಕಿಶನ್ ಸಿಡಿಲಬ್ಬರದ ಬ್ಯಾಟಿಂಗ್
​ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಆರಂಭಿಕ ಆಟಗಾರ ಇಶಾನ್ ಕಿಶನ್ ಅಬ್ಬರದ ಆರಂಭ ನೀಡಿದರು. ಕೇವಲ 40 ಎಸೆತಗಳಲ್ಲಿ 10 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 77 ರನ್ ಚಚ್ಚಿದ ಕಿಶನ್, ಪಾಕ್ ಬೌಲರ್‌ಗಳನ್ನು ಕಂಗೆಡಿಸಿದರು. ಇವರಿಗೆ ಸಾಥ್ ನೀಡಿದ ತಿಲಕ್ ವರ್ಮಾ ಮತ್ತು ರಿಂಕು ಸಿಂಗ್ ಉಪಯುಕ್ತ ರನ್ ಗಳಿಸಿದರು. ಅಂತಿಮವಾಗಿ ಭಾರತ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್‌ಗಳ ಬೃಹತ್ ಮೊತ್ತ ಪೇರಿಸಿತು.

ತತ್ತರಿಸಿದ ಪಾಕಿಸ್ತಾನ ಬ್ಯಾಟಿಂಗ್
​176 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಪಾಕಿಸ್ತಾನ ಭಾರತದ ಶಿಸ್ತಿನ ಬೌಲಿಂಗ್ ದಾಳಿಗೆ ತತ್ತರಿಸಿತು. ಜಸ್‌ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಆರಂಭದಲ್ಲೇ ವಿಕೆಟ್ ಉರುಳಿಸಿ ಪಾಕ್ ಬೆನ್ನೆಲುಬು ಮುರಿದರು. ಮಧ್ಯಮ ಕ್ರಮಾಂಕದಲ್ಲಿ ಉಸ್ಮಾನ್ ಖಾನ್ (44 ರನ್) ಹೊರತುಪಡಿಸಿ ಉಳಿದ್ಯಾವ ಬ್ಯಾಟರ್‌ಗಳೂ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಅಂತಿಮವಾಗಿ ಪಾಕಿಸ್ತಾನ 18 ಓವರ್‌ಗಳಲ್ಲಿ 114 ರನ್‌ಗಳಿಗೆ ಸರ್ವಪತನ ಕಂಡಿತು.
ಭಾರತದ ಬೌಲಿಂಗ್:
​ಹಾರ್ದಿಕ್ ಪಾಂಡ್ಯ: 2 ವಿಕೆಟ್
​ಜಸ್‌ಪ್ರೀತ್ ಬುಮ್ರಾ: 2 ವಿಕೆಟ್
​ವರುಣ್ ಚಕ್ರವರ್ತಿ: 2 ವಿಕೆಟ್
​ಅಕ್ಷರ್ ಪಟೇಲ್: 2 ವಿಕೆಟ್

​ಈ ಗೆಲುವಿನೊಂದಿಗೆ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದು, ಅಧಿಕೃತವಾಗಿ ಸೂಪರ್-8 ಹಂತಕ್ಕೆ ಅರ್ಹತೆ ಪಡೆದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅಂತರಾಷ್ಟ್ರೀಯ ಕ್ರೀಡೆ ರಾಷ್ಟ್ರೀಯ