
ಸುಳ್ಯ : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಹಲವು ಕಡೆಗಳಲ್ಲಿ ಕೆಪ್ಪಟ್ರಾಯ (ಮಂಗನಬಾವು-ಮಂಪ್ಸ್) ರೋಗ ಕಾಣಿಸಿಕೊಳ್ಳುತ್ತಿದೆ. ಮಾರಣಾಂತಿಕ, ಅಪಾಯಕಾರಿ ಕಾಯಿಲೆ ಅಲ್ಲದಿದ್ದರೂ ಶಾಲಾ ಮಕ್ಕಳಲ್ಲಿ ಹೆಚ್ಚಾಗಿ ಈ ರೋಗ ದೃಢಪಡುತ್ತಿದೆ.ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಕಾಯಿಲೆಯಾದರಿಂದ ಪೋಷಕರಲ್ಲಿ ಆತಂಕ ಮನೆ ಮಾಡಿದೆ.


ಸುಳ್ಯ ನಗರ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೆಪ್ಪಟ್ರಾಯ ಕಂಡುಬಂದಿದೆ. ರೋಗ ನಿರೋಧಕ ಶಕ್ತಿ ಇಲ್ಲದವರಲ್ಲಿ ತೀವ್ರವಾಗಿ ಹರಡುತ್ತದೆ. ಸಾಂಕ್ರಾಮಿಕ ಕಾಯಿಲೆ ಇದಾಗಿದ್ದು, ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. 10ರಿಂದ 15 ದಿನಗಳೊಳಗೆ ವೈರಸ್ ಹರಡಲು ಸಮಯ ತೆಗೆದುಕೊಳ್ಳುತ್ತದೆ.
ಲಕ್ಷಣಗಳು
ಈ ಕಾಯಿಲೆ ಆರಂಭಕ್ಕೂ ಮುನ್ನ ಜ್ವರ, ತಲೆನೋವು, ಗಂಟಲು ನೋವು ಇರುತ್ತದೆ. ಇದಾದ ಬಳಿಕ ಕಿವಿಯ ಗ್ರಂಥಿಯ ಬಳಿ ನೋವು ಉಂಟಾಗುತ್ತದೆ. ಕಿವಿಯ ಬಳಿ ಊತ ಕಂಡುಬರುತ್ತದೆ. ಸುಮಾರು ಐದು ದಿನ ದವಡೆ ದಪ್ಪವಾಗಿ ವಿಪರೀತ ನೋವಿನಿಂದ ಕೂಡಿರುತ್ತದೆ.
ವೈರಸ್ ಹರಡುವಿಕೆಯಿಂದ ಗದ್ದಕಟ್ಟು ರೋಗ ಕಾಣಿಸಿಕೊಳ್ಳುತ್ತದೆ. ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ರೋಗ ಶಮನಕ್ಕೆ ವಿಶ್ರಾಂತಿಯೇ ಮುಖ್ಯ. ರೋಗ ಕಂಡುಬಂದರೆ ವೈದ್ಯರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿ.
ಮಂಗನಬಾವಿಗೆ ತುತ್ತಾದವರ ಆರೈಕೆ ಹೇಗಿರುತ್ತದೆ?
ಕೆಪ್ಪಟ್ರಾಯ, ಕೆಪ್ಪಟೆ, ಮಂಗನಬಾವು ಕಾಯಿಲೆಗೆ ನಿರ್ದಿಷ್ಟ ಚಿಕಿತ್ಸೆ ಎಂಬುದಿಲ್ಲವಾದರೂ ತೊಂದರೆಗಳಿಗೆ ಚಿಕಿತ್ಸೆ ಅಗತ್ಯ. ಹೀಗಾಗಿ ರೋಗಿಯ ಬಾಯಿಯನ್ನು ಸ್ವಚ್ಛವಾಗಿರಿಸಬೇಕು. ರೋಗಿ ದ್ರವಾಹಾರ ಅಥವಾ ಮೆತ್ತಗಿರುವ ಆಹಾರವನ್ನು ಸೇವಿಸಬೇಕು. ನೋವು ನಿವಾರಕ ಗುಳಿಗೆಗಳನ್ನು ವೈದ್ಯರು ನೀಡುತ್ತಾರೆ. ಅಲ್ಲದೆ ರೋಗಿಯ ಗುಣಲಕ್ಷಣಗಳಿಗೆ ಅನುಸಾರವಾಗಿ ಜೀವನಿರೋಧಕಗಳನ್ನು ನೀಡಲಾಗುತ್ತದೆ. ನಾಲ್ಕೈದು ದಿನ ರೆಸ್ಟ್ ಪಡೆಯುವುದು ಉತ್ತಮ ಮಾರ್ಗೋಪಾಯ.
ಇನ್ನು ನಗರದ ವಿವಿದ ಶಾಲೆಗಳ ಹಲವು ಮಕ್ಕಳಿಗೆ ಕೆಪ್ಪಟ್ರಾಯ (ಮಂಗನಬಾವು-ಮಂಪ್ಸ್) ರೋಗ ಕಾಣಿಸಿಕೊಂಡಿದ್ದರು , ಪೋಷಕರು , ಶಿಕ್ಷಕರು ಇದರ ಬಗ್ಗೆ ಬಹಿರಂಗ ಪಡಿಸುತ್ತಿಲ್ಲ , ಇನ್ನು ಈ ಕಾಯಿಲೆ ಹರಡದಂತೆ ಮಕ್ಕಳು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಬಗ್ಗೆ ಆರೋಗ್ಯ ಇಲಾಖೆ ಕೂಡಲೇ ಕಾರ್ಯಪ್ರವೃತರಾಗಬೇಕಾಗಿದೆ.
