ಇನ್ಶೂರೆನ್ಸ್ ಹಣಕ್ಕಾಗಿ ತಮ್ಮನನ್ನೇ ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಿದ ಅಣ್ಣ ಸೇರಿ ನಾಲ್ವರ ಬಂಧನ!

ಇನ್ಶೂರೆನ್ಸ್ ಹಣಕ್ಕಾಗಿ ತಮ್ಮನನ್ನೇ ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಿದ ಅಣ್ಣ ಸೇರಿ ನಾಲ್ವರ ಬಂಧನ!

ತುಮಕೂರು: ವಿಮಾ ಹಣದ ಆಸೆಗೆ ಬಿದ್ದು ಸ್ವಂತ ತಮ್ಮನನ್ನೇ ಕೊಲೆ ಮಾಡಿ, ಅದನ್ನು ರಸ್ತೆ ಅಪಘಾತ ಎಂದು ಬಿಂಬಿಸಲು ಯತ್ನಿಸಿದ ಭೀಕರ ಘಟನೆ ತುಮಕೂರಿನಲ್ಲಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಅಣ್ಣ ಸೇರಿದಂತೆ ನಾಲ್ವರು ಆರೋಪಿಗಳನ್ನು ತುಮಕೂರು ಪೊಲೀಸರು ಬಂಧಿಸಿದ್ದಾರೆ.​

ಜೂನ್ 20 ರಂದು ತುಮಕೂರಿನ ರಸ್ತೆ ಬದಿಯಲ್ಲಿ ದ್ವಿಚಕ್ರ ವಾಹನದ ಮೇಲಿದ್ದ ಆಂಧ್ರಪ್ರದೇಶ ಮೂಲದ ರಮೇಶ್ ಎಂಬುವವರ ಕೊಳೆತ ದೇಹ ಪತ್ತೆಯಾಗಿತ್ತು. ಆರಂಭದಲ್ಲಿ ಇದು ರಸ್ತೆ ಅಪಘಾತ ಇರಬಹುದು ಎಂದು ಶಂಕಿಸಲಾಗಿತ್ತು. ಆದರೆ ಪೊಲೀಸ್ ತನಿಖೆ ಮತ್ತು ಮರಣೋತ್ತರ ಪರೀಕ್ಷೆಯ ವರದಿಯಿಂದ ಇದು ವ್ಯವಸ್ಥಿತವಾಗಿ ನಡೆದ ಕೊಲೆ ಎಂಬ ಆಘಾತಕಾರಿ ಸತ್ಯ ಬಯಲಾಗಿದೆ.

ಅಪಘಾತ ಎಂದು ಬಿಂಬಿಸಲು ಸ್ಕೆಚ್:ಘಟನೆ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಅಶೋಕ್ ಕೆ. ವೆಂಕಟ್, “ಜೂನ್ 20 ರ ಸಂಜೆ ರಸ್ತೆ ಬದಿಯ ಬೈಕ್ ಮೇಲೆ ಕೊಳೆತ ಸ್ಥಿತಿಯಲ್ಲಿದ್ದ ಶವ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಇದು ಅಪಘಾತದಂತೆ ಕಂಡರೂ, ದೇಹದ ಮೇಲಿದ್ದ ಗಾಯದ ಗುರುತುಗಳು ಅನುಮಾನ ಮೂಡಿಸಿದ್ದವು. ಹೀಗಾಗಿ ಅಸಹಜ ಸಾವು (UDR) ಪ್ರಕರಣ ದಾಖಲಿಸಿಕೊಂಡು ಶವ ಪರೀಕ್ಷೆಗೆ ಕಳುಹಿಸಲಾಗಿತ್ತು” ಎಂದರು.

ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ರಮೇಶ್ ಅವರ ಕುತ್ತಿಗೆ ಹಿಸುಕಿ, ಭಾರವಾದ ವಸ್ತುವಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವುದು ದೃಢಪಟ್ಟಿದೆ.

30 ಲಕ್ಷ ರೂ. ವಿಮಾ ಹಣಕ್ಕಾಗಿ ಕೊಲೆ!ಪೊಲೀಸರು ತನಿಖೆ ತೀವ್ರಗೊಳಿಸಿದಾಗ ಮೃತನ ಸ್ವಂತ ಅಣ್ಣ ಹನುಮಂತರಾಜು ತನ್ನ ಸಹಚರರಾದ ಲಕ್ಷ್ಮೀಕಾಂತ್, ನವೀನ್ ಕುಮಾರ್ ಮತ್ತು ಎಂಡಿ ಜಿಲಾನಿ ಜೊತೆ ಸೇರಿ ಈ ಹತ್ಯೆ ಮಾಡಿರುವುದು ಪತ್ತೆಯಾಗಿದೆ. ಆರೋಪಿ ಹನುಮಂತರಾಜು ಎರಡು ವರ್ಷಗಳ ಹಿಂದೆ ತಮ್ಮ ರಮೇಶ್ ಹೆಸರಿನಲ್ಲಿ 15 ಲಕ್ಷ ರೂಪಾಯಿ ಮೌಲ್ಯದ ಜೀವ ವಿಮೆ (Life Insurance) ಮಾಡಿಸಿದ್ದ. ನಿಯಮಗಳ ಪ್ರಕಾರ ಅಪಘಾತದಲ್ಲಿ ಮೃತಪಟ್ಟರೆ ವಿಮಾ ಹಣ ದುಪ್ಪಟ್ಟು, ಅಂದರೆ 30 ಲಕ್ಷ ರೂಪಾಯಿ ಸಿಗುತ್ತಿತ್ತು. ಈ ಹಣವನ್ನು ಲೂಟಿ ಮಾಡುವ ಉದ್ದೇಶದಿಂದಲೇ ತಮ್ಮನನ್ನು ಕೊಲೆ ಮಾಡಿ ಅಪಘಾತದ ಡ್ರಾಮಾ ಮಾಡಲಾಗಿತ್ತು ಎಂದು ಎಸ್‌ಪಿ ತಿಳಿಸಿದ್ದಾರೆ.​

ಮಾಟಮಂತ್ರದ ಆಯಾಮದಲ್ಲೂ ತನಿಖೆ:ಮೃತ ರಮೇಶ್ ಮಾಟಮಂತ್ರ (Black Magic) ಮಾಡುತ್ತಿದ್ದ ಎನ್ನಲಾಗಿದ್ದು, ಈತನಿಂದ ನೆರೆಹೊರೆಯವರು ತೊಂದರೆ ಅನುಭವಿಸುತ್ತಿದ್ದರು ಎಂದು ಆತನಿಂದ ದೂರವಿದ್ದ ಪತ್ನಿ ಪೊಲೀಸರಿಗೆ ತಿಳಿಸಿದ್ದಾರೆ. ಹೀಗಾಗಿ ಪೊಲೀಸರು ಇನ್ಶೂರೆನ್ಸ್ ಹಣದ ಜೊತೆಗೆ ಮಾಟಮಂತ್ರದ ಆಯಾಮದಲ್ಲೂ ತನಿಖೆ ಮುಂದುವರಿಸಿದ್ದಾರೆ.

​ಸದ್ಯ ಬಂಧಿತ ನಾಲ್ವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಶೀಘ್ರದಲ್ಲೇ ದೋಷಾರೋಪ ಪಟ್ಟಿ (Charge Sheet) ಸಲ್ಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಅಪರಾಧ ರಾಜ್ಯ