ಹೆಚ್‌ಎಎಲ್ ‘ಧ್ರುವ ಎನ್‌ಜಿ’ ಹೆಲಿಕಾಪ್ಟರ್‌ನ ಮೊದಲ ಹಾರಾಟ ಯಶಸ್ವಿ: ಸ್ವಾವಲಂಬಿ ಭಾರತದ ಮುಕುಟಕ್ಕೆ ಮತ್ತೊಂದು ಗರಿ!

ಹೆಚ್‌ಎಎಲ್ ‘ಧ್ರುವ ಎನ್‌ಜಿ’ ಹೆಲಿಕಾಪ್ಟರ್‌ನ ಮೊದಲ ಹಾರಾಟ ಯಶಸ್ವಿ: ಸ್ವಾವಲಂಬಿ ಭಾರತದ ಮುಕುಟಕ್ಕೆ ಮತ್ತೊಂದು ಗರಿ!

ಬೆಂಗಳೂರು: ಭಾರತದ ರಕ್ಷಣಾ ಮತ್ತು ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಮಂಗಳವಾರ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸ್ಥಾಪನೆಯಾಗಿದೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಅಭಿವೃದ್ಧಿಪಡಿಸಿರುವ ಸುಧಾರಿತ ನಾಗರಿಕ ಹೆಲಿಕಾಪ್ಟರ್ ‘ಧ್ರುವ ಎನ್‌ಜಿ’ (Dhruv Next Gen) ತನ್ನ ಚೊಚ್ಚಲ ಹಾರಾಟವನ್ನು ಯಶಸ್ವಿಯಾಗಿ ಪೂರೈಸಿದೆ.

ಬೆಂಗಳೂರಿನ ಹೆಚ್‌ಎಎಲ್ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮ್ ಮೋಹನ್ ನಾಯ್ಡು ಅವರು ಈ ಹೆಲಿಕಾಪ್ಟರ್‌ನ ಹಾರಾಟಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, “ಧ್ರುವ ಎನ್‌ಜಿ ಕೇವಲ ಒಂದು ಯಂತ್ರವಲ್ಲ, ಇದು ಭಾರತದ ತಾಂತ್ರಿಕ ಸಾಮರ್ಥ್ಯ ಮತ್ತು ಸ್ವಾವಲಂಬನೆಯ ಸಂಕೇತವಾಗಿದೆ,” ಎಂದು ಬಣ್ಣಿಸಿದರು.

ಧ್ರುವ ಎನ್‌ಜಿ ವೈಶಿಷ್ಟ್ಯಗಳು​: ನಾಗರಿಕ ಮಾರುಕಟ್ಟೆಯ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾದ ಈ ಹೆಲಿಕಾಪ್ಟರ್ ಹಲವು ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ;

  • ಗಾಜಿನ ಕಾಕ್‌ಪಿಟ್: ವಿಶ್ವದರ್ಜೆಯ ನಾಗರಿಕ-ಪ್ರಮಾಣೀಕೃತ ಗ್ಲಾಸ್ ಕಾಕ್‌ಪಿಟ್ ಅಳವಡಿಸಲಾಗಿದೆ.
  • ಸುಧಾರಿತ ಏವಿಯಾನಿಕ್ಸ್: ಚಾಲಕರಿಗೆ ಹಾರಾಟದ ಸಮಯದಲ್ಲಿ ಹೆಚ್ಚಿನ ಸ್ಪಷ್ಟತೆ ನೀಡುವ ಅತ್ಯಾಧುನಿಕ ಏವಿಯಾನಿಕ್ಸ್ ಸೂಟ್ ಇದರಲ್ಲಿದೆ.
  • ಸುರಕ್ಷತೆ ಮತ್ತು ಸೌಕರ್ಯ: ಹಾರಾಟದ ಸಮಯದಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ ಮತ್ತು ಅತ್ಯುತ್ತಮ ಸವಾರಿ ಗುಣಮಟ್ಟವನ್ನು ಒದಗಿಸುತ್ತದೆ.
  • ಆಮದಿಗೆ ಪರ್ಯಾಯ: ಇದು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುವ ಲಘು ಟ್ವಿನ್-ಎಂಜಿನ್ ಹೆಲಿಕಾಪ್ಟರ್‌ಗಳಿಗೆ ಪ್ರಬಲ ಪರ್ಯಾಯವಾಗಿ ಹೊರಹೊಮ್ಮಲಿದೆ.

ಸ್ವದೇಶಿ ಬಲಕ್ಕೆ ಆನೆಬಲ​ ಈ ಹೆಲಿಕಾಪ್ಟರ್‌ನ ಯಶಸ್ವಿ ಹಾರಾಟದಿಂದಾಗಿ ಭಾರತವು ಜಾಗತಿಕ ಏರೋಸ್ಪೇಸ್ ಮಾರುಕಟ್ಟೆಯಲ್ಲಿ ತನ್ನ ನೆಲೆಯನ್ನು ಇನ್ನಷ್ಟು ಗಟ್ಟಿಗೊಳಿಸಿಕೊಂಡಿದೆ. ನಾಗರಿಕ ಸಾರಿಗೆ, ತುರ್ತು ವೈದ್ಯಕೀಯ ಸೇವೆ ಹಾಗೂ ವಿಪತ್ತು ನಿರ್ವಹಣೆಯಲ್ಲಿ ಈ ಹೆಲಿಕಾಪ್ಟರ್ ಪ್ರಮುಖ ಪಾತ್ರ ವಹಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಂತ್ರಜ್ಞಾನ ರಾಜ್ಯ ರಾಷ್ಟ್ರೀಯ