ಕಾಠ್ಮಂಡು, ಸೆ. 09: ನೇಪಾಳದಲ್ಲಿ ಜೆನ್ಜಿ ಸಮುದಾಯದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಸೋಶಿಯಲ್ ಮೀಡಿಯಾ ಬ್ಯಾನ್ ವಿರುದ್ಧ ಪ್ರಾರಂಭವಾದ ಹೋರಾಟ ಇದೀಗ ವ್ಯಾಪಕ ಹಿಂಸಾಚಾರಕ್ಕೆ ಕಾರಣವಾಗಿದೆ.

ಪ್ರಧಾನಿ ಕೆಪಿ ಒಲಿ ಶರ್ಮಾ ರಾಜೀನಾಮೆ ನೀಡಿರುವುದಾಗಿ ಘೋಷಿಸಿದ್ದಾರೆ. ಇತ್ತ ಗೃಹ ಸಚಿವರೂ ಸಹ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರತಿಭಟನಕಾರರು ಪ್ರಧಾನಿಯ ನಿವಾಸ ಹಾಗೂ ರಾಷ್ಟ್ರಪತಿ ರಾಮಚಂದ್ರ ಪೌದೆಲ್ ಅವರ ಮನೆಯಲ್ಲಿ ಬೆಂಕಿ ಹಚ್ಚಿದ್ದಾರೆ. ಅನೇಕ ಮಾಜಿ ಸಚಿವರು ಹಾಗೂ ನಾಯಕರ ಮನೆಗಳಿಗೂ ದಾಳಿ ನಡೆದಿದೆ.
ಸಂಸತ್ತಿಗೂ ಬೆಂಕಿ
ಪ್ರತಿಭಟನಕಾರರು ನೇಪಾಳ ಸಂಸತ್ತಿಗೂ ದಾಳಿ ನಡೆಸಿ ಕಟ್ಟಡದ ಕೆಲ ಭಾಗಕ್ಕೆ ಬೆಂಕಿ ಹಚ್ಚಿದ್ದಾರೆ. ಈ ಘಟನೆ ಶ್ರೀಲಂಕಾ ಮತ್ತು ಬಾಂಗ್ಲಾದೇಶದಲ್ಲಿ ನಡೆದ ರಾಜಕೀಯ ಅಸ್ಥಿರತೆಯ ಸನ್ನಿವೇಶಗಳನ್ನು ನೆನಪಿಸುತ್ತದೆ.
ಅಮೆರಿಕ–ಸೊರೋಸ್ ಕೈವಾಡ?
ನೇಪಾಳದಂತಹ ನೆರೆ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಅಸ್ಥಿರತೆಯ ಹಿಂದೆ ಅಮೆರಿಕ ಹಾಗೂ ಉದ್ಯಮಿ ಜಾರ್ಜ್ ಸೊರೋಸ್ ಕೈವಾಡವಿದೆಯೇ ಎನ್ನುವ ಅನುಮಾನಗಳು ತೀವ್ರಗೊಂಡಿವೆ. ಬಾಂಗ್ಲಾದೇಶ, ಶ್ರೀಲಂಕಾ ಬಳಿಕ ನೇಪಾಳದಲ್ಲೂ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದರಿಂದ ಭಾರತಕ್ಕೆ ರಾಜಕೀಯ ಸಂದೇಶ ಕಳುಹಿಸುವ ಪ್ರಯತ್ನವೋ ಎಂಬ ಪ್ರಶ್ನೆ ಎದ್ದಿದೆ.
ವಿದ್ಯಾರ್ಥಿ, ಯುವಕರ ಪ್ರತಿಭಟನೆ
ಈ ಹೋರಾಟದ ಅಸ್ತ್ರ ವಿದ್ಯಾರ್ಥಿ ಹಾಗೂ ಯುವ ಸಮುದಾಯ. ಬಾಂಗ್ಲಾದೇಶ, ಶ್ರೀಲಂಕಾ, ಇದೀಗ ನೇಪಾಳದಲ್ಲೂ ವಿದ್ಯಾರ್ಥಿಗಳೇ ಪ್ರಮುಖ ಶಕ್ತಿಯಾಗಿ ಸರ್ಕಾರದ ವಿರುದ್ಧ ಬೀದಿಗಿಳಿದಿದ್ದಾರೆ. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಈಗ ಸರ್ಕಾರದ ಪತನದ ಅಂಚಿನತ್ತ ದೂಡಿದೆ.

