
ಬೆಂಗಳೂರು: ಉಜಿರೆಯ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸಿಬಿಐ ನ್ಯಾಯಾಲಯ ಮಹತ್ವದ ತೀರ್ಪು ನೀಡಿದ್ದು, ಆರೋಪಿ ಸಂತೋಷ್ ರಾವ್‌ರನ್ನು ಖುಲಾಸೆಗೊಳಿಸಿ ಇಂದು ತೀರ್ಪು ನೀಡಿದೆ.

ಸಾಕ್ಷ್ಯಾಧಾರಗಳ ಕೊರತೆ ಕಾರಣಕ್ಕೆ ಆರೋಪಿ ಸಂತೋಷ್ ರಾವ್ನನ್ನು ನಿರ್ದೋಷಿ ಎಂದು ಬೆಂಗಳೂರು ಸಿಬಿಐ ಕೋರ್ಟ್ ನ್ಯಾಯಮೂರ್ತಿ ಸಿಬಿ ಸಂತೋಷ್ ಆದೇಶ ಹೊರಡಿಸಿದ್ದಾರೆ. ಬರೋಬ್ಬರಿ 11 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಸಿಬಿಐ ಕೋರ್ಟ್ ಅಂತಿಮ ತೀರ್ಪು ಪ್ರಕಟಿಸಿದೆ.
ಉಜಿರೆ ಎಸ್.ಡಿ.ಎಂ ಕಾಲೇಜು ವಿದ್ಯಾರ್ಥಿನಿಯಾಗಿದ್ದ ಸೌಜನ್ಯಳನ್ನು ಅಪಹರಿಸಿ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. 2012ರ ಅಕ್ಟೋಬರ್ 10 ರಂದು ಧರ್ಮಸ್ಥಳದ ಬಳಿ ಸೌಜನ್ಯ ಮೃತದೇಹ ಪತ್ತೆಯಾಗಿತ್ತು. ಪ್ರಕರಣ ಸಂಬಂಧ ಆರೋಪಿ ಸಂತೋಷ್ ರಾವ್ ಎಂಬಾತನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದರು. ಬಳಿಕ ಪೊಲೀಸರು ಸರಿಯಾಗಿ ತನಿಖೆ ನಡೆಸಿಲ್ಲ ಎಂಬ ಆರೋಪ ವ್ಯಕ್ತವಾಗಿತ್ತು. ಹೀಗಾಗಿ ಹಲವು ಹೋರಾಟಗಳ ಬಳಿಕ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಗಿತ್ತು.