ಒಳಾಂಗಣ ಪ್ರವೇಶಿಸಿದ ದೇವರು : ಕುಕ್ಕೆಯಲ್ಲಿ ಶ್ರೀ ದೇವರ ನಿತ್ಯೋತ್ಸವ ಸಂಪನ್ನ.

ಒಳಾಂಗಣ ಪ್ರವೇಶಿಸಿದ ದೇವರು : ಕುಕ್ಕೆಯಲ್ಲಿ ಶ್ರೀ ದೇವರ ನಿತ್ಯೋತ್ಸವ ಸಂಪನ್ನ.

ಸುಬ್ರಹ್ಮಣ್ಯ: ಪ್ರಸಿದ್ದ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶ್ರೀದೇವರ ಹೊರಾಂಗಣ ಉತ್ಸವಾದಿಗಳು ಗುರುವಾರ ತೆರೆ ಕಂಡಿತು. ದೇವರು ಒಳಾಂಗಣ ಪ್ರವೇಶಿಸುವುದರೊಂದಿಗೆ ಶ್ರೀದೇವರ ನಿತ್ಯೋತ್ಸವ ಸಂಪನ್ನವಾಯಿತು.ಶುದ್ಧ ಷಷ್ಠಿಯ ದಿನವಾದ ಗುರುವಾರ ಹೊರಾಂಗಣದಲ್ಲಿ ಪಾಲಕಿ ಮತ್ತು ಬಂಡಿ ಉತ್ಸವ ನೆರವೇರಿದ ಬಳಿಕ ಶ್ರೀ ದೇವರು ಒಳಾಂಗಣ ಪ್ರವೇಶಿಸುವುದರೊಂದಿಗೆ ಕ್ಷೇತ್ರದಲ್ಲಿ ಉತ್ಸವಗಳು ಕೊನೆಯಾಯಿತು. ನಾಡಿನ ಉಳಿದ ದೇವಾಲಯಗಳಲ್ಲಿ ಪತ್ತನಾಜೆಯಂದು ಕೊನೆಯ ಉತ್ಸವವಾಗಿ ಉತ್ಸವಮೂರ್ತಿಯು ಗರ್ಭಗುಡಿಯನ್ನು ಪ್ರವೇಶಿಸುವುದರೊಂದಿಗೆ ಉತ್ಸವಗಳು ಕೊನೆಯಾಗುತ್ತದೆ. ಆದರೆ ಕುಕ್ಕೆಯಲ್ಲಿ ಮಾತ್ರ ದೀಪಾವಳಿ ಅಮವಾಸ್ಯೆಯಂದು ಉತ್ಸವ ಆರಂಭವಾಗಿ ಜೇಷ್ಠ ಶುದ್ಧಷಷ್ಠಿಯಂದು ಕೊನೆಯ ಉತ್ಸವವು ನಡೆಯುತ್ತದೆ. ಆದರೆ ಗುರುವಾರ ಷಷ್ಠಿ ಮತ್ತು ಪತ್ತನಾಜೆ ಜೊತೆಯಾಗಿ ಬಂದಿರುವುದು ವಿಶೇಷ.

ಈ ಬಾರಿ ಜೇಷ್ಠ ಶುದ್ಧಷಷ್ಠಿಯ ದಿನವಾದ ಗುರುವಾರ ರಾತ್ರಿ ಮಹಾಪೂಜೆಯ ಬಳಿಕ ಹೊರಾಂಗಣದಲ್ಲಿ ಬಂಡಿ ಉತ್ಸವ ಮತ್ತು ಪಾಲಕಿ ಉತ್ಸವಗಳು ನೆರವೇರಿತು. ಆನೆ, ಬಿರುದಾವಳಿ, ಬ್ಯಾಂಡ್, ನಾದಸ್ವರ, ಸ್ಯಾಕ್ಸೋಪೋನ್‌ಗಳನ್ನೊಳಗೊಂಡ ಹೊರಾಂಗಣ ಉತ್ಸವ ನೆರವೇರಿತು. ಈ ನಂತರ ದೇವಾಲಯನಗರದಲ್ಲಿ ದೇವರು ಗರ್ಭಗೃಹ ಪ್ರವೇಶಿಸುವುದರೊಂದಿಗೆ ನಿತ್ಯೋತ್ಸವವಕ್ಕೆ ತೆರೆಯಾಯಿತು.ಸಹಸ್ರಾರು ಊರ ಮತ್ತು ಪರವೂರ ಭಕ್ತಾಧಿಗಳು ಈ ಸಂದರ್ಭದಲ್ಲಿ ಶ್ರೀ ದೇವರ ಉತ್ಸವಾಧಿಗಳನ್ನು ಶ್ರದ್ಧಾಭಕ್ತಿಯಿಂದ ವೀಕ್ಷಿಸಿದರು.

ಮುಂದಿನ ದೀಪಾವಳಿ ಅಮವಾಸ್ಯೆಯಂದು ಮತ್ತೆ ಶ್ರೀ ದೇವರು ಹೊರಾಂಗಣ ಪ್ರವೇಶಿಸುವುದರ ಮೂಲಕ ಉತ್ಸವಾದಿಗಳು ಮತ್ತು ಹರಕೆ ಉತ್ಸವಗಳು ಆರಂಭವಾಗುತ್ತದೆ. ಆದರೆ ರಥಬೀದಿಯಲ್ಲಿ ರಥೋತ್ಸವವು ಜಾತ್ರಾ ಸಮಯದ ನಂತರ ಆರಂಭವಾಗಲಿದ್ದು, ಆ ಬಳಿಕ ಹರಕೆಯ ರಥೋತ್ಸವಗಳು ನೆರವೇರಲಿದೆ.

ಸೇವೆಗಳು ಎಂದಿನಂತೆ:

ಹರಕೆ ಉತ್ಸವಗಳು ಮಾತ್ರ ದೇವಳದಲ್ಲಿ ದೀಪಾವಳಿ ಅಮವಾಸ್ಯೆಯ ತನಕ ನಡೆಯುವುದಿಲ್ಲ ಆದರೆ ದಿನನಿತ್ಯ ನಡೆಯುವ ಹರಕೆ ಸೇವೆಗಳಾದ ಸರ್ಪಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ, ತುಲಾಭಾರ ಇತ್ಯಾದಿ ಸೇವೆಗಳು ಏಕಾದಶಿ ಮತ್ತಿತರ ಉಪವಾಸ ದಿನಗಳನ್ನು ಹೊರತು ಪಡಿಸಿ ಉಳಿದೆಲ್ಲಾ ದಿನಗಳಲ್ಲಿ ಎಂದಿನಂತೆ ಜರುಗುತ್ತದೆ.

ರಾಜ್ಯ