ಚೆನ್ನೈ: ತಮಿಳುನಾಡು ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಬೆಳವಣಿಗೆಯೊಂದರಲ್ಲಿ, ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಇಂದು (ಶುಕ್ರವಾರ) ಮಧ್ಯಾಹ್ನ 12 ಗಂಟೆಗೆ ಸೋಶಿಯಲ್ ಮೀಡಿಯಾ ಮೂಲಕ ಸಾರ್ವಜನಿಕರೊಂದಿಗೆ ಮುಕ್ತ ಸಂವಾದ ನಡೆಸಲಿದ್ದಾರೆ. ಅವರು ಬಿಜೆಪಿಯನ್ನು ತೊರೆದು ಹೊಸ ಪಕ್ಷ ಸ್ಥಾಪಿಸಲಿದ್ದಾರೆ ಎಂಬ ವದಂತಿಗಳು ದಟ್ಟವಾಗಿರುವ ಬೆನ್ನಲ್ಲೇ ಈ ನಿರ್ಧಾರ ಹೊರಬಿದ್ದಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಗುರುವಾರ ರಾತ್ರಿ ತಮ್ಮ ಅಧಿಕೃತ ‘X’ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ಅಣ್ಣಾಮಲೈ, “ನಾಳೆ (ಶುಕ್ರವಾರ) ಮಧ್ಯಾಹ್ನ 12 ಗಂಟೆಗೆ ನಿಮ್ಮೆಲ್ಲರೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಸಂವಾದ ನಡೆಸಲು ನಾನು ಉತ್ಸುಕನಾಗಿದ್ದೇನೆ. ನನ್ನ ಆಲೋಚನೆಗಳನ್ನು ಹಂಚಿಕೊಳ್ಳಲು ಮತ್ತು ಮುಕ್ತವಾಗಿ, ಮನಬಿಚ್ಚಿ ಮಾತನಾಡಲು ಕಾಯುತ್ತಿದ್ದೇನೆ,” ಎಂದು ಬರೆದುಕೊಂಡಿದ್ದಾರೆ.

ಅಮಿತ್ ಶಾ ಭೇಟಿಯಾಗಿದ್ದ ಅಣ್ಣಾಮಲೈ ಕಳೆದ ಮಂಗಳವಾರವಷ್ಟೇ ಅಣ್ಣಾಮಲೈ ಅವರು ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಮತ್ತು ಹಿರಿಯ ನಾಯಕ ಬಿ.ಎಲ್. ಸಂತೋಷ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಈ ಭೇಟಿಯ ಬೆನ್ನಲ್ಲೇ ಅವರು ಬಿಜೆಪಿ ತೊರೆದು ಹೊಸ ಪ್ರಾದೇಶಿಕ ಪಕ್ಷ ಕಟ್ಟಲಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾರಂಭಿಸಿದ್ದವು.
ಈ ವದಂತಿಗಳ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ, “ದಯವಿಟ್ಟು ಕಾಯಿರಿ. ಇನ್ನು ಎರಡು ದಿನಗಳಲ್ಲಿ ನಾವು ಒಟ್ಟಿಗೆ ಕುಳಿತು ಮಾತನಾಡೋಣ,” ಎಂದು ಹೇಳುವ ಮೂಲಕ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದರು.
ಕೊಯಮತ್ತೂರಿನಲ್ಲಿ ರಾರಾಜಿಸುತ್ತಿವೆ ಪೋಸ್ಟರ್ಗಳುಜೂನ್ 4 ರಂದು ಅಣ್ಣಾಮಲೈ ಅವರ ಜನ್ಮದಿನವಾಗಿದ್ದು, ಇದಕ್ಕೂ ಮುನ್ನವೇ ಕೊಯಮತ್ತೂರಿನ ಪ್ರಮುಖ ರಸ್ತೆಗಳಲ್ಲಿ ಬೆಂಬಲಿಗರು ಬೃಹತ್ ಪೋಸ್ಟರ್ಗಳನ್ನು ಹಾಕಿದ್ದಾರೆ. ಅದರಲ್ಲಿ “ನಮ್ಮ ನಾಯಕರೇ, ಬನ್ನಿ ಮತ್ತು ನಮ್ಮನ್ನು ಮುನ್ನಡೆಸಿ” ಎಂಬ ಘೋಷಣೆಗಳನ್ನು ಬರೆಯಲಾಗಿದ್ದು, ಅವರು ಹೊಸ ರಾಜಕೀಯ ಹೆಜ್ಜೆ ಇಡಲಿದ್ದಾರೆ ಎಂಬ ಮುನ್ಸೂಚನೆಯಂತೆ ಇದು ಕಾಣಿಸುತ್ತಿದೆ.
ತಮಿಳುನಾಡು ರಾಜಕೀಯದಲ್ಲಿ ಬದಲಾದ ಚಿತ್ರಣಇತ್ತೀಚೆಗೆ ನಡೆದ 2026ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ನಟ ವಿಜಯ್ ನೇತೃತ್ವದ ಟಿವಿಕೆ (TVK) ಪಕ್ಷವು ಭರ್ಜರಿ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಡಿಎಂಕೆ ಮತ್ತು ಅಣ್ಣಾಡಿಎಂಕೆ ಪಕ್ಷಗಳ ದಶಕಗಳ ಪಾರುಪತ್ಯಕ್ಕೆ ಬ್ರೇಕ್ ಹಾಕಿತ್ತು. ವಿಜಯ್ ಅವರು ತಮಿಳುನಾಡಿನ 13ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ, ತಮಿಳುನಾಡು ಬಿಜೆಪಿಯಲ್ಲೂ ದೊಡ್ಡ ಮಟ್ಟದ ಆಂತರಿಕ ಬದಲಾವಣೆಗಳಾಗುತ್ತಿವೆ.
ಈ ಹಿನ್ನೆಲೆಯಲ್ಲಿ, ಇಂದು ಮಧ್ಯಾಹ್ನ ನಡೆಯಲಿರುವ ಅಣ್ಣಾಮಲೈ ಅವರ ಸೋಶಿಯಲ್ ಮೀಡಿಯಾ ಲೈವ್ ಸಂವಾದವು ಅವರ ಮುಂದಿನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಅತ್ಯಂತ ನಿರ್ಣಾಯಕ ಎನ್ನಲಾಗಿದೆ.

