ಬೆಂಗಳೂರು: ಶ್ರೀ ಅಖಿಲ ಹವ್ಯಕ ಮಹಾಸಭಾ (ರಿ.) ವತಿಯಿಂದ 2026ನೇ ಸಾಲಿನ ಪ್ರತಿಷ್ಠಿತ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಕ್ರೋಶ ಕಲೆಯ ಮೂಲಕ ಅಸಾಧಾರಣ ಸಾಧನೆ ಮಾಡಿರುವ ಶ್ರೀಮತಿ ಪೂರ್ಣಿಮಾ ಕೆ. ಭಟ್ ಅವರಿಗೆ ‘ಹವ್ಯಕ ಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಇದೇ ಮಾರ್ಚ್ 29, ಭಾನುವಾರ ಸಂಜೆ 4:00 ಗಂಟೆಗೆ ಮಲ್ಲೇಶ್ವರಂನ ಹವ್ಯಕ ಭವನದಲ್ಲಿ ನಡೆಯಲಿರುವ ‘ಸಂಸ್ಥಾಪನೋತ್ಸವ’ ಮತ್ತು ವಿಶೇಷ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಗೌರವ ಸಮರ್ಪಣೆಯಾಗಲಿದೆ.

ದಕ್ಷಿಣ ಕನ್ನಡದ ಕಡಬ ತಾಲೂಕಿನ ಪೆರಾಬೆ ಗ್ರಾಮ ಕದಿರಡ್ಕದ ಪೂರ್ಣಿಮಾ ಕೆ. ಭಟ್ ಅವರು ದೈಹಿಕ ಸವಾಲುಗಳ ನಡುವೆಯೂ ಗಾಲಿಕುರ್ಚಿಯಲ್ಲೇ ಕುಳಿತು ತಮ್ಮ ಸೃಜನಶೀಲತೆಯಿಂದ ಸಾಧನೆಯ ಶಿಖರ ಏರಿದವರು. ಬಾಲ್ಯದಲ್ಲಿ ಕಲಿತ ಕ್ರೋಶ ಕಲೆಯನ್ನೇ ಬಂಡವಾಳವಾಗಿಸಿಕೊಂಡು “Crochet on Wheels” ಎಂಬ ಹೆಸರಿನಲ್ಲಿ ಇಂದು ಯಶಸ್ವಿ ಕ್ರೋಶ ಕಲಾವಿದೆಯಾಗಿ ಹೊರಹೊಮ್ಮಿದ್ದಾರೆ.
https://www.instagram.com/crochetonwheels
ಇವರು ಸಿದ್ಧಪಡಿಸುವ ಕಸ್ಟಮೈಸ್ಡ್ ಡಿಸೈನ್‌ಗಳು, ಅಮಿಗುರುಮಿ ಆಟಿಕೆಗಳು ಹಾಗೂ ಇವರು ನಡೆಸುವ ಆನ್‌ಲೈನ್ ವರ್ಕ್‌ಶಾಪ್‌ಗಳು ಇಂದು ಅನೇಕರಿಗೆ ಸ್ಫೂರ್ತಿಯಾಗಿವೆ. ಜೀವನದ ಅನಿರೀಕ್ಷಿತ ತಿರುವುಗಳನ್ನು ಮೆಟ್ಟಿ ನಿಂತು ಸಾಧನೆ ಮಾಡಿರುವ ಇವರ ಛಲವನ್ನು ಗುರುತಿಸಿ ಮಹಾಸಭಾವವು ಈ ಪ್ರಶಸ್ತಿಯನ್ನು ನೀಡುತ್ತಿದೆ.

ಇದೇ ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಶ್ರೀ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಮತ್ತು ಪ್ರೊ. ಎಸ್. ಶಂಭು ಭಟ್ ಕಡತೋಕ (ಹವ್ಯಕ ವಿಭೂಷಣ), ಶ್ರೀ ನೀರ್ನಳ್ಳಿ ಗಣಪತಿ, ಡಾ. ವೈ. ವಿ. ಕೃಷ್ಣಮೂರ್ತಿ ಮತ್ತು ಶ್ರೀ ಉಮೇಶ ಬಂದಗದ್ದೆ (ಹವ್ಯಕ ಭೂಷಣ) ಅವರಿಗೂ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪೂರ್ಣಿಮಾ ಅವರೊಂದಿಗೆ ವೇ. ಮೂ. ಸುಚೇತನ ಭಟ್, ಡಾ. ಆನಂದ ಹೆಗಡೆ ಶಿರೇಹಳ್ಳಿ ಹಾಗೂ ಕು. ಪ್ರತ್ಯುಷಾ ಕುಮಾರ್ ಅವರು ‘ಹವ್ಯಕ ಶ್ರೀ’ ಗೌರವಕ್ಕೆ ಪಾತ್ರರಾಗಿದ್ದಾರೆ.

ಹಾಗೆಯೇ, ಶ್ರೀ ಅಖಿಲ ಹವ್ಯಕ ಮಹಾಸಭಾ (ರಿ.) ವತಿಯಿಂದ ಡಾ. ಬಿ. ವಿ. ನರಹರಿ ರಾವ್, ಶ್ರೀ ಜೋನಂತಾಯ ಶಿವಶಂಕರ ಭಟ್ ಮತ್ತು ಶ್ರೀ ಕೃಷ್ಣಮೂರ್ತಿ ಹೆಗಡೆ ತ್ಯಾಗಲಿ ಅವರಿಗೆ ‘ಹವ್ಯಕ ಸೇವಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

