ಅಟ್ಯಾಕ್ ಆದಾಗಲೇ ಕಂಬಳ ಬಿಟ್ಟವನಲ್ಲ, ಈಗ ರಾಜಿ ಮಾಡೋ ಪ್ರಶ್ನೆಯೇ ಇಲ್ಲ”: ‘ಕಂಬಳ ಭೀಷ್ಮ’ ಗುಣಪಾಲ ಕಡಂಬ

ಅಟ್ಯಾಕ್ ಆದಾಗಲೇ ಕಂಬಳ ಬಿಟ್ಟವನಲ್ಲ, ಈಗ ರಾಜಿ ಮಾಡೋ ಪ್ರಶ್ನೆಯೇ ಇಲ್ಲ”: ‘ಕಂಬಳ ಭೀಷ್ಮ’ ಗುಣಪಾಲ ಕಡಂಬ

ಮಂಗಳೂರು: ಕರಾವಳಿಯ ಜಾನಪದ ಕ್ರೀಡೆ ಕಂಬಳದ ಶಿಸ್ತು ಮತ್ತು ಘನತೆಗಾಗಿ ದಶಕಗಳಿಂದ ಶ್ರಮಿಸುತ್ತಿರುವ ‘ಕಂಬಳ ಭೀಷ್ಮ’ ಗುಣಪಾಲ ಕಡಂಬ ಅವರು ಇತ್ತೀಚಿನ ವಿವಾದಗಳ ಕುರಿತು ಸ್ಫೋಟಕವಾಗಿ ಪ್ರತಿಕ್ರಿಯಿಸಿದ್ದಾರೆ.

ಮಂಗಳೂರಿನಲ್ಲಿ ನಡೆದ ಕಂಬಳವೊಂದರ ವೇಳೆ ಉಂಟಾದ ಅವಮಾನದ ಬೆನ್ನಲ್ಲೇ ಮಾತನಾಡಿರುವ ಅವರು, “ನನ್ನ ಮೇಲೆ ಹಿಂದೆ ದೈಹಿಕವಾಗಿ ಅಟ್ಯಾಕ್ ಆದಾಗಲೇ ನಾನು ಕಂಬಳವನ್ನು ಬಿಟ್ಟುಕೊಟ್ಟವನಲ್ಲ. ಈಗ ಯಾರೋ ಬೆದರಿಕೆ ಹಾಕಿದರೆ ಅಥವಾ ಒತ್ತಡ ಹೇರಿದರೆ ನಾನು ಮಣಿಯುವ ಪ್ರಶ್ನೆಯೇ ಇಲ್ಲ” ಎಂದು ಖಡಕ್ ಆಗಿ ಹೇಳಿದ್ದಾರೆ.

ಕಂಬಳ ಕ್ಷೇತ್ರದಲ್ಲಿ ಪಾರದರ್ಶಕತೆ ಮತ್ತು ನೈತಿಕತೆಯನ್ನು ಪ್ರತಿಪಾದಿಸುತ್ತಾ ಬಂದಿರುವ ಅವರು, ತಮ್ಮ ದೀರ್ಘಕಾಲದ ಪಯಣದಲ್ಲಿ ಯಾವುದೇ ಆಮಿಷಗಳಿಗೆ ಒಳಗಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ಕಳೆದ 55 ವರ್ಷಗಳಲ್ಲಿ ಒಂದು ಕವರಿಗೆ ಕೈ ಕೊಟ್ಟವನು ನಾನಲ್ಲ. ಶಿಸ್ತಿನ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಯಾವುದೇ ರಾಜಿ ಪಂಚಾಯಿತಿಗಳಿಗೆ ನಾನು ಬದ್ಧನೂ ಅಲ್ಲ” ಎನ್ನುವ ಮೂಲಕ ತಮ್ಮ ಮೇಲಿನ ಆರೋಪಗಳಿಗೆ ಹಾಗೂ ಸಂಧಾನದ ಪ್ರಯತ್ನಗಳಿಗೆ ತಡೆಗೋಡೆ ನಿರ್ಮಿಸಿದ್ದಾರೆ.

ಇತ್ತೀಚೆಗೆ ಮಂಗಳೂರಿನ ಬಂಗ್ರಕೂಳೂರಿನಲ್ಲಿ ನಡೆದ ‘ರಾಮ-ಲಕ್ಷ್ಮಣ’ ಜೋಡುಕರೆ ಕಂಬಳದ ವೇಳೆ ವೇದಿಕೆಯಲ್ಲೇ ವ್ಯಕ್ತಿಯೊಬ್ಬರು ಕಡಂಬ ಅವರಿಗೆ ಅವಮಾನ ಮಾಡಿರುವ ಘಟನೆ ಕಂಬಳಾಭಿಮಾನಿಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಕಂಬಳಕ್ಕೆ ಅಥ್ಲೆಟಿಕ್ ಶಿಸ್ತು ಮತ್ತು ಆಧುನಿಕ ಸ್ಪರ್ಶ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಹಿರಿಯ ತೀರ್ಪುಗಾರರ ವಿರುದ್ಧದ ಈ ನಡವಳಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಖಂಡಿಸಲಾಗುತ್ತಿದೆ.

ಪ್ರಸ್ತುತ ಕಂಬಳ ಕೂಟಗಳಲ್ಲಿ ಶಿಸ್ತು ಕಡಿಮೆಯಾಗುತ್ತಿದೆ ಮತ್ತು ವೈಯಕ್ತಿಕ ಪ್ರತಿಷ್ಠೆಗಳು ಹೆಚ್ಚಾಗುತ್ತಿವೆ ಎಂಬ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಗುಣಪಾಲ ಕಡಂಬ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. “ನಾನು ಕಂಬಳದ ಹಿತಕ್ಕಾಗಿ ಕೆಲಸ ಮಾಡುವವನು, ವ್ಯಕ್ತಿಗಳ ಹಿತಕ್ಕಲ್ಲ” ಎಂದು ಹೇಳುವ ಮೂಲಕ ಕಂಬಳದ ಸಂಪ್ರದಾಯ ಮತ್ತು ಶಿಸ್ತನ್ನು ಉಳಿಸಲು ತಾವು ಸದಾ ಸಿದ್ಧ ಎಂಬ ಸಂದೇಶವನ್ನು ಇಡೀ ಕಂಬಳ ಲೋಕಕ್ಕೆ ರವಾನಿಸಿದ್ದಾರೆ.

ಕ್ರೀಡೆ ಪ್ರಾದೇಶಿಕ