ಹೊಸ ವರ್ಷದ ಪಾರ್ಟಿಯಲ್ಲಿ ಫುಲ್ ಟೈಟಾದ್ರೆ ಪೊಲೀಸರೇ ಬಿಡ್ತಾರೆ ಮನೆಗೆ – ‘ಡ್ರಾಪ್ ಫೆಸಿಲಿಟಿ’ ಘೋಷಿಸಿದ ಗೃಹ ಸಚಿವ ಜಿ. ಪರಮೇಶ್ವರ್

ಹೊಸ ವರ್ಷದ ಪಾರ್ಟಿಯಲ್ಲಿ ಫುಲ್ ಟೈಟಾದ್ರೆ ಪೊಲೀಸರೇ ಬಿಡ್ತಾರೆ ಮನೆಗೆ – ‘ಡ್ರಾಪ್ ಫೆಸಿಲಿಟಿ’ ಘೋಷಿಸಿದ ಗೃಹ ಸಚಿವ ಜಿ. ಪರಮೇಶ್ವರ್

ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಅಹಿತಕರ ಘಟನೆಗಳನ್ನು ತಡೆಯಲು ಮತ್ತು ಸಾರ್ವಜನಿಕರ ಸುರಕ್ಷತೆಗಾಗಿ ಕರ್ನಾಟಕ ಸರ್ಕಾರ ಒಂದು ವಿಶೇಷ ಕ್ರಮಕ್ಕೆ ಮುಂದಾಗಿದೆ. ಈ ಬಾರಿ ಅತಿಯಾಗಿ ಮದ್ಯಪಾನ ಮಾಡಿ ಸಂಕಷ್ಟಕ್ಕೀಡಾದವರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲು ‘ಡ್ರಾಪ್ ಫೆಸಿಲಿಟಿ’ ನೀಡುವುದಾಗಿ ಗೃಹ ಸಚಿವ ಜಿ. ಪರಮೇಶ್ವರ್ ಘೋಷಿಸಿದ್ದಾರೆ.

ಈ ವರ್ಷ ಬೆಂಗಳೂರು ಪೊಲೀಸ್ ಇಲಾಖೆಯು “ಜವಾಬ್ದಾರಿಯಿಂದ ಸಂಭ್ರಮಿಸೋಣ” ಎಂಬ ವಿಶೇಷ ಥೀಮ್ ಅಡಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಯಾರಿಗೂ ತೊಂದರೆಯಾಗದಂತೆ, ಸಾರ್ವಜನಿಕ ಶಾಂತಿಗೆ ಭಂಗ ತರದೇ ಹೊಸ ವರ್ಷವನ್ನು ಸ್ವಾಗತಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಅತಿಯಾಗಿ ಕುಡಿದು ನಡೆಯಲು ಸಾಧ್ಯವಾಗದ ಅಥವಾ ಪ್ರಜ್ಞಾಹೀನ ಸ್ಥಿತಿಯಲ್ಲಿರುವವರನ್ನು ರಕ್ಷಿಸಲು ನಗರದಾದ್ಯಂತ 15 ವಿವಿಧ ಸ್ಥಳಗಳಲ್ಲಿ ವಿಶ್ರಾಂತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅಲ್ಲಿ ಅವರ ಅಮಲು ಇಳಿಯುವವರೆಗೂ ವೈದ್ಯಕೀಯ ನಿಗಾವಣೆ ಅಥವಾ ವಿಶ್ರಾಂತಿಗೆ ಅವಕಾಶ ನೀಡಲಾಗುತ್ತದೆ. ನಂತರ ಅವರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆಯನ್ನು ಪೊಲೀಸರು ಮಾಡಲಿದ್ದಾರೆ.

ನಿಯಮ ಮೀರಿದರೆ ಕಠಿಣ ಕ್ರಮ​

  • ಡ್ರಿಂಕ್ ಆಂಡ್ ಡ್ರೈವ್: ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ 160ಕ್ಕೂ ಹೆಚ್ಚು ಕಡೆ ತಪಾಸಣೆ ನಡೆಯಲಿದ್ದು, ಕಠಿಣ ಕ್ರಮ ಜರುಗಿಸಲಾಗುವುದು.
  • ಸಿಸಿಟಿವಿ ಕಣ್ಗಾವಲು: ನಗರದ ಪ್ರತಿ ಮೂಲೆಯಲ್ಲೂ ಸಿಸಿಟಿವಿ ಹಾಗೂ ಡ್ರೋನ್ ಮೂಲಕ ನಿಗಾ ವಹಿಸಲಾಗುತ್ತದೆ.
  • ಅಸಭ್ಯ ವರ್ತನೆ: ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುವವರ ವಿರುದ್ಧ ತಕ್ಷಣವೇ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ.

ಗೃಹ ಸಚಿವರು ರಾಜ್ಯದ ಜನತೆಗೆ ಹೊಸ ವರ್ಷ 2026ರ ಶುಭಾಶಯ ಕೋರುತ್ತಾ, ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಶಾಂತಿಯುತವಾಗಿ ಸಂಭ್ರಮಿಸಲು ಮನವಿ ಮಾಡಿದ್ದಾರೆ.

ರಾಜಕೀಯ ರಾಜ್ಯ