ಬೆಂಗಳೂರು, ಸೆ. 09:
ಧರ್ಮಸ್ಥಳ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಗಂಭೀರ ಆರೋಪಗಳನ್ನು ನಾಗರಿಕ ಸೇವಾ ಟ್ರಸ್ಟ್ ಹಾಗೂ ಫೆಡರೇಶನ್ ಆಫ್ ಸತ್ಯಮೇವ ಜಯತೇ ಆರ್ಗನೈಸೇಶನ್ಸ್ ಸಂಸ್ಥೆಗಳು ಮುಂದಿಟ್ಟಿವೆ.


ಟ್ರಸ್ಟ್ ಅಧ್ಯಕ್ಷ ಕೆ. ಸೋಮನಾಥ ನಾಯಕ್ ಹಾಗೂ ಸಹ-ಸಂಯೋಜಕ ರಂಜನ್ ರಾವ್ ಯೆರ್ಡೂರು ಅವರು ಗೃಹ ಸಚಿವ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಸಂಪುಟ ಹಾಗೂ ಲೋಕಸಭೆ-ರಾಜ್ಯಸಭಾ ಸದಸ್ಯರಿಗೆ ಪತ್ರ ಬರೆದು, ಹೆಗ್ಗಡೆ ಅವರ ವಿರುದ್ಧ ಭೂ ಹಗರಣ, ಆರ್ಥಿಕ ಅಕ್ರಮ, ದಲಿತ ಶೋಷಣೆ ಮತ್ತು ಅಕ್ರಮ ಹಣಕಾಸು ವ್ಯವಹಾರಗಳ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಪತ್ರದಲ್ಲಿ ಹೆಗ್ಗಡೆ ಹಾಗೂ ಅವರ ಕುಟುಂಬದವರ ವಿರುದ್ಧ ಸುಮಾರು 2500 ಎಕರೆ ಭೂಮಿ ಹಗರಣ, ಸಾವಿರಾರು ಕೋಟಿ ಆರ್ಥಿಕ ಅಕ್ರಮ, ಎಸ್.ಸಿ./ಎಸ್.ಟಿ. ಸಿಬ್ಬಂದಿ ನೇಮಕಾತಿ ನಿಯಮ ಉಲ್ಲಂಘನೆ, ಅನುದಾನ ದುರುಪಯೋಗ ಸೇರಿದಂತೆ ಅನೇಕ ಆರೋಪಗಳನ್ನು ಉಲ್ಲೇಖಿಸಲಾಗಿದೆ.

ಇದಲ್ಲದೆ, ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ನಡೆದಿವೆ ಎಂಬ ಆಘಾತಕಾರಿ ಮಾಹಿತಿ ಹೊರಬಂದಿದ್ದು, ಕರ್ನಾಟಕ ಸರ್ಕಾರ ರಚಿಸಿರುವ ಎಸ್‌ಐಟಿ ಈಗಾಗಲೇ ತನಿಖೆ ಆರಂಭಿಸಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಅದರೊಂದಿಗೆ, ಮತ್ತೊಂದು ಎಸ್‌ಐಟಿ ಅಥವಾ ಆಯೋಗವನ್ನು ರಚಿಸಿ, ದೊಡ್ಡ ಮಟ್ಟದ ಭೂ ಕಬಳಿಕೆ, ದಲಿತ ಶೋಷಣೆ ಮತ್ತು ಅಕ್ರಮ ಹಣಕಾಸು ವ್ಯವಹಾರಗಳ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

