ಉಪರಾಷ್ಟ್ರಪತಿ ಚುನಾವಣೆಗೆ ಕೌಂಟ್‌ಡೌನ್ – ಸಂಜೆ ಫಲಿತಾಂಶ ನಿರೀಕ್ಷೆ

ಉಪರಾಷ್ಟ್ರಪತಿ ಚುನಾವಣೆಗೆ ಕೌಂಟ್‌ಡೌನ್ – ಸಂಜೆ ಫಲಿತಾಂಶ ನಿರೀಕ್ಷೆ

ನವದೆಹಲಿ: ದೇಶದ 15ನೇ ಉಪರಾಷ್ಟ್ರಪತಿಯನ್ನು ಆಯ್ಕೆ ಮಾಡಲು ಸಂಸತ್ತಿನಲ್ಲಿ ಇಂದು (ಮಂಗಳವಾರ) ಚುನಾವಣೆ ನಡೆಯಲಿದೆ. ಈ ಬಾರಿ ಎನ್‌ಡಿಎ ಪರವಾಗಿ ಮಹಾರಾಷ್ಟ್ರ ರಾಜ್ಯಪಾಲರಾದ ಸಿ.ಪಿ. ರಾಧಾಕೃಷ್ಣನ್ ಹಾಗೂ ಇಂಡಿಯಾ ಬ್ಲಾಕ್ ಪರವಾಗಿ ಮಾಜಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ. ಸುಧರ್ಶನ ರೆಡ್ಡಿ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದಾರೆ.

ಮತದಾನ ಬೆಳಿಗ್ಗೆ 10 ಗಂಟೆಗೆ ಆರಂಭವಾಗಿ ಸಂಜೆ 5 ಗಂಟೆಯವರೆಗೆ ನಡೆಯಲಿದ್ದು, ಸಂಜೆ 6 ಗಂಟೆಯ ಬಳಿಕ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.

ಉಪರಾಷ್ಟ್ರಪತಿ ಚುನಾವಣೆಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲಾ ಸದಸ್ಯರನ್ನೊಳಗೊಂಡ ಚುನಾವಣಾ ಮಂಡಳಿಯೇ ಮತ ಚಲಾಯಿಸುತ್ತದೆ. ಮತದಾನ ರಹಸ್ಯ ಮತದಾನದ ಮೂಲಕ ಹೊಸ ಸಂಸತ್ ಭವನದಲ್ಲಿ ನಡೆಯಲಿದೆ. ಈ ಚುನಾವಣೆಯಲ್ಲಿ ಪ್ರತಿಯೊಂದು ಮತಕ್ಕೂ ಸಮಾನ ಮೌಲ್ಯವಿರುತ್ತದೆ.

ಪ್ರಸ್ತುತ ಲೋಕಸಭೆಯಲ್ಲಿ 542 ಮಂದಿ ಮತ್ತು ರಾಜ್ಯಸಭೆಯಲ್ಲಿ 239 ಮಂದಿ ಸದಸ್ಯರಿದ್ದು, ಒಟ್ಟು 781 ಮಂದಿ ಚುನಾವಣಾ ಮಂಡಳಿಯ ಭಾಗವಾಗಿದ್ದಾರೆ. ಬಹುಮತದ ಅಂಕೆ 391 ಆಗಿದೆ.

ಈ ಹಿನ್ನೆಲೆಯಲ್ಲಿ ಉಪರಾಷ್ಟ್ರಪತಿ ಸ್ಥಾನಕ್ಕಾಗಿ ನಡೆಯುತ್ತಿರುವ ಸ್ಪರ್ಧೆ ರಾಜಕೀಯ ವಲಯದಲ್ಲಿ ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿದೆ.

ರಾಷ್ಟ್ರೀಯ