ಮೊದಲನೇ ಖೋ ಖೋ ವಿಶ್ವಕಪ್ ಗೆದ್ದ ಭಾರತ; ಮಹಿಳಾ ಮತ್ತು ಪುರುಷರ ವಿಭಾಗಗಳಲ್ಲಿಯೂ ಭಾರತಕ್ಕೆ ಗೆಲುವು;

ಮೊದಲನೇ ಖೋ ಖೋ ವಿಶ್ವಕಪ್ ಗೆದ್ದ ಭಾರತ; ಮಹಿಳಾ ಮತ್ತು ಪುರುಷರ ವಿಭಾಗಗಳಲ್ಲಿಯೂ ಭಾರತಕ್ಕೆ ಗೆಲುವು;

ಮೊದಲನೇ ಖೋ ಖೋ ವಿಶ್ವಕಪ್ ಗೆದ್ದ ಖುಷಿಯಲ್ಲಿ ಭಾರತೀಯ ಪುರುಷರ ಮತ್ತು ಮಹಿಳೆಯರ ತಂಡ

ಪ್ರಥಮ ಖೋ ಖೋ ವಿಶ್ವಕಪ್ ಜನವರಿ 13, 2025 ರಂದು ಪ್ರಾರಂಭವಾಗಿ , ಜನವರಿ 19, 2025ರ ವರೆಗೆ ನಡೆಯಿತು. ಆರು ಖಂಡಗಳ ಸುಮಾರು 23 ದೇಶಗಳು ಭಾಗವಹಿಸಿದ್ದವು. ಇದರಲ್ಲಿ 20 ಪುರುಷರ ತಂಡಗಳು ಮತ್ತು 19 ಮಹಿಳಾ ತಂಡಗಳು ಪೈಪೋಟಿ ನಡೆಸಿದವು. ಭಾರತೀಯ ಖೋ ಖೋ ಫೆಡರೇಷನ್ ಮತ್ತು ಅಂತರಾಷ್ಟ್ರೀಯ ಖೋ ಖೋ ಫೆಡರೇಷನ್ ಜೊತೆಗೂಡಿ ಈ ಟೂರ್ನಮೆಂಟ್ ಅನ್ನು ಆಯೋಜಿಸಿದ್ದವು. ಭಾರತದ ಪಾರಂಪರಿಕ ಕ್ರೀಡೆ ಖೋ ಖೋ ಅನ್ನು ಜಾಗತಿಕ ಮಟ್ಟದಲ್ಲಿ ಉತ್ತೇಜಿಸುವುದು  ಈ ವಿಶ್ವಕಪ್ ಪಂದ್ಯದ ಮೂಲ ಉದ್ದೇಶವಾಗಿತ್ತು.

ಜನವರಿ 19 ರಂದು ಹೊಸದಿಲ್ಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತೀಯ ಪುರುಷರ ಮತ್ತು ಮಹಿಳಾ ತಂಡಗಳು ಚಾಂಪಿಯನ್ ಆಗಿ ಹೊರಹೊಮ್ಮಿದವು. ಪುರುಷರ ತಂಡವು ನೇಪಾಳವನ್ನು 54-36 ಅಂತರದಿಂದ ಸೋಲಿಸಿದರೆ, ಮಹಿಳಾ ತಂಡವು 78-40 ಅಂತರದಲ್ಲಿ ನೇಪಾಳವನ್ನು ಸೋಲಿಸಿತು.

ಭಾರತೀಯ ಖೋ ಖೋ ತಂಡಕ್ಕೆ ಆಯ್ಕೆಯಾದ ಆಟಗಾರರಲ್ಲಿ ಕರ್ನಾಟಕದ ಇಬ್ಬರು ಕ್ರೀಡಾಪಟುಗಳು ಆಯ್ಕೆಯಾಗಿದ್ದು ಹೆಮ್ಮೆಯ ವಿಷಯ. ಪುರುಷರ ತಂಡಕ್ಕೆ ಎಂ.ಕೆ. ಗೌತಮ್ ಮತ್ತು ಮಹಿಳೆಯರ ತಂಡಕ್ಕೆ ಚೈತ್ರಾ ಬಿ ಆಯ್ಕೆಯಾಗಿದ್ದರು. ಎಮ್.ಕೆ ಗೌತಮ್ ಮಂಡ್ಯ ಜಿಲ್ಲೆಯ ಮದ್ದೂರಿನ ಪ್ರತಿಭೆಯಾದರೆ, ಚೈತ್ರಾ ಎಂ. ಮೈಸೂರಿನ ಟಿ. ನರಸಿಪುರ ತಾಲೂಕಿನವರು. ಇವರಿಬ್ಬರೂ ತಮ್ಮ ತಮ್ಮ ತಂಡಗಳಲ್ಲಿ ಆಡಿ ಪಂದ್ಯವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಷ್ಟೇ ಅಲ್ಲದೇ, ಪಂದ್ಯ ಶ್ರೇಷ್ಠರೆಂಬ ಗೌರವಕ್ಕೆ ಭಾಜನರಾದರು.

ಮಾನ್ಯ ಮುಖ್ಯಮಂತ್ರಿಗಳೊಂದಿಗೆ ವಿಶ್ವಕಪ್ ಗೆದ್ದ ತಂಡದಲ್ಲಿ ಆಡಿದ ಹೆಮ್ಮೆಯ ಕನ್ನಡಿಗರು

ವಿಶ್ವಕಪ್ ಗೆದ್ದ ಕನ್ನಡಿಗರಿಗೆ ಕರ್ನಾಟಕ ಸರಕಾರವು ₹5 ಲಕ್ಷ ನಗದು ಬಹುಮಾನವನ್ನು ನೀಡಲು ನಿರ್ಧರಿಸಿತ್ತು. ಇಬ್ಬರು ಆಟಗಾರರು ಕರ್ನಾಟಕ ಸರ್ಕಾರ ನೀಡಿದ ₹5 ಲಕ್ಷ ನಗದು ಬಹುಮಾನವನ್ನು ತಿರಸ್ಕರಿಸಿದ್ದಷ್ಟೇ ಅಲ್ಲದೆ, “ನಾವು ಕರ್ನಾಟಕ ಸರಕಾರವು ನೀಡುತ್ತಿರುವ ಬಹುಮಾನವನ್ನು ತಿರಸ್ಕರಿಸಿ, ಅವರನ್ನು ಅಪಮಾನಿಸುತ್ತಿಲ್ಲ. ಆದರೆ, ನಮ್ಮ ಯೋಗ್ಯತೆಗೆ ತಕ್ಕ ಗೌರವ ದೊರೆತಿಲ್ಲ” ಎಂದು ಗೌತಮ್ ಮಾಧ್ಯಮದವರಿಗೆ ಹೇಳಿದ್ದಾರೆ. ಭಾರತೀಯ ತಂಡದಲ್ಲಿ ಭಾಗವಹಿಸಿದ ಆಟಗಾರರಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಮಾತ್ರ ತಲಾ ಇಬ್ಬರು ಆಟಗಾರರು ಭಾಗವಹಿಸಿದ್ದರು. ಆದರೆ ಮಹಾರಾಷ್ಟ್ರವು ತಮ್ಮ ರಾಜ್ಯಕ್ಕೆ ಹೆಮ್ಮೆ ತಂದ ಆಟಗಾರರಿಗೆ ಉತ್ತಮ ಬೆಂಬಲವನ್ನು ನೀಡಿದೆ. ಮಹಾರಾಷ್ಟ್ರ ಸರಕಾರವು ತನ್ನ ರಾಜ್ಯದಿಂದ ವಿಶ್ವಕಪ್‌ನಲ್ಲಿ ಭಾಗವಹಿಸಿದ ಆಟಗಾರರಿಗೆ ₹2.25 ಕೋಟಿ ನಗದು ಬಹುಮಾನ ಹಾಗೂ ಸರಕಾರಿ ಉದ್ಯೋಗ ನೀಡಿದ್ದು, ಅಲ್ಲಿಂದಲೂ ಇಬ್ಬರೇ ಆಟಗಾರರು ಭಾಗವಹಿಸಿದ್ದರು. ನಮಗೂ ನಮ್ಮ ಶ್ರಮಕ್ಕೆ ಯೋಗ್ಯ ಗೌರವ ಸಿಗಬೇಕು.” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. “ಕ್ರಿಕೆಟ್‌ಗೆ ನಿರಂತರ ಬಹುಮಾನಗಳು ಮತ್ತು ಬದ್ಧತೆ ನೀಡಲಾಗುತ್ತಿದೆ, ಆದರೆ ಏಕೋ ಏನೋ ಪಾರಂಪರಿಕ ಕ್ರೀಡೆಯನ್ನು ಉತ್ತೇಜಿಸುವ ಆಸಕ್ತಿ ತೋರುತ್ತಿಲ್ಲ” ಎಂದು ತಮ್ಮ ಬೇಸರವನ್ನು ಹೊರಹಾಕಿದರು.

ಇದೇ ಭಾವನೆಯನ್ನು ವ್ಯಕ್ತಪಡಿಸುತ್ತಾ ಮಾತನಾಡಿದ ಚೈತ್ರಾ, “ಉಳಿದ ರಾಜ್ಯಗಳಲ್ಲಿ ಖೋ ಖೋ ಆಟಗಾರರಿಗೆ ದೊರೆತ ಗೌರವವು ನಮಗೂ ಸಲ್ಲಬೇಕು. ನಾವು ಪದಕಗಳನ್ನು ಗೆದ್ದಿದ್ದರೂ, ಬೇರೆ ಕ್ರೀಡೆಗಳ ಆಟಗಾರರಿಗಿಂತ ನಮಗೆ ಕಡಿಮೆ ಸೌಲಭ್ಯಗಳು ದೊರೆಯುತ್ತಿವೆ. ಈ ರೀತಿಯ ವರ್ತನೆ ಈ ಆಟದ ಬಗ್ಗೆ ನಿರಾಸಕ್ತಿ ಮೂಡುವುದಕ್ಕೆ ಕಾರಣವಾಗುತ್ತದೆ” ಎಂದು  ವಿಷಾದ ವ್ಯಕ್ತಪಡಿಸಿದರು. ಈ ಕ್ರೀಡಾಪಟುಗಳ ದಿಟ್ಟ ನಿರ್ಧಾರವು ಪಾರಂಪರಿಕ ಕ್ರೀಡೆಗಳಂತಹ ಖೋ ಖೋ ಆಟಗಾರರಿಗೆ ಹೆಚ್ಚಿನ ಮಾನ್ಯತೆ ಮತ್ತು ಪ್ರೋತ್ಸಾಹದ ಅಗತ್ಯವಿದೆ ಎಂಬುದನ್ನು ಸೂಚಿಸುತ್ತದೆ.

ಕ್ರೀಡೆ