ಲಂಕಾ ವಿರುದ್ಧ ಭಾರತಕ್ಕೆ ಸರಣಿ ಕ್ಲೀನ್ ಸ್ವೀಪ್ ಸಕ್ಸಸ್; ನಾಯಕಿ ಹರ್ಮನ್‌ಪ್ರೀತ್ ಭರ್ಜರಿ ಬ್ಯಾಟಿಂಗ್!

ಲಂಕಾ ವಿರುದ್ಧ ಭಾರತಕ್ಕೆ ಸರಣಿ ಕ್ಲೀನ್ ಸ್ವೀಪ್ ಸಕ್ಸಸ್; ನಾಯಕಿ ಹರ್ಮನ್‌ಪ್ರೀತ್ ಭರ್ಜರಿ ಬ್ಯಾಟಿಂಗ್!

ತಿರುವನಂತಪುರಂ: ಭಾರತದ ಮಹಿಳಾ ಕ್ರಿಕೆಟ್ ತಂಡವು ತನ್ನ ಅಮೋಘ ಫಾರ್ಮ್ ಅನ್ನು ಮುಂದುವರಿಸಿದ್ದು, ಶ್ರೀಲಂಕಾ ವಿರುದ್ಧದ ಐದನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ 15 ರನ್‌ಗಳ ರೋಚಕ ಜಯ ಸಾಧಿಸಿದೆ. ಈ ಮೂಲಕ ಭಾರತ ತಂಡವು ಐದು ಪಂದ್ಯಗಳ ಸರಣಿಯನ್ನು 5-0 ಅಂತರದಿಂದ ತನ್ನದಾಗಿಸಿಕೊಂಡು ‘ವೈಟ್‌ವಾಷ್‌’ ಗೌರವಕ್ಕೆ ಪಾತ್ರವಾಗಿದೆ.

ಸಂಕಷ್ಟದಲ್ಲಿ ಆಸರೆಯಾದ ನಾಯಕಿ ಹರ್ಮನ್‌ಪ್ರೀತ್​ತಿರುವನಂತಪುರಂನ ಗ್ರೀನ್‌ಫೀಲ್ಡ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಆರಂಭಿಕ ಆಘಾತ ಎದುರಾಗಿತ್ತು. ಸ್ಟಾರ್ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ (5) ಬೇಗನೇ ಔಟಾದರು. ಒಂದು ಹಂತದಲ್ಲಿ ತಂಡ 77 ರನ್‌ಗಳಿಗೆ 5 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ, ನಾಯಕಿ ಹರ್ಮನ್‌ಪ್ರೀತ್ ಕೌರ್ ಜವಾಬ್ದಾರಿಯುತ ಆಟ ಪ್ರದರ್ಶಿಸಿದರು. ಕೇವಲ 43 ಎಸೆತಗಳಲ್ಲಿ 68 ರನ್ (9 ಬೌಂಡರಿ, 1 ಸಿಕ್ಸರ್) ಚಚ್ಚಿದ ಹರ್ಮನ್, ತಂಡದ ಮೊತ್ತವನ್ನು 175ಕ್ಕೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಂತಿಮ ಹಂತದಲ್ಲಿ ಅರುಂಧತಿ ರೆಡ್ಡಿ ಕೇವಲ 11 ಎಸೆತಗಳಲ್ಲಿ 27 ರನ್ ಸಿಡಿಸಿ ತಂಡಕ್ಕೆ ನೆರವಾದರು.

176 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಶ್ರೀಲಂಕಾ ಪರ ಆರಂಭಿಕ ಆಟಗಾರ್ತಿ ಹಾಸಿನಿ ಪೆರೇರಾ (65) ಮತ್ತು ಇಮೇಶಾ ದುಲಾನಿ (50) ಅರ್ಧಶತಕ ಬಾರಿಸಿ ಗೆಲುವಿನ ಭರವಸೆ ಮೂಡಿಸಿದ್ದರು. ಇವರಿಬ್ಬರ 79 ರನ್‌ಗಳ ಜೊತೆಯಾಟ ಭಾರತಕ್ಕೆ ಸವಾಲಾಗಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಭಾರತೀಯ ಬೌಲರ್‌ಗಳ ಶಿಸ್ತುಬದ್ಧ ದಾಳಿಗೆ ಲಂಕಾ ಬ್ಯಾಟರ್‌ಗಳು ತತ್ತರಿಸಿದರು. ಅಂತಿಮವಾಗಿ ಶ್ರೀಲಂಕಾ 7 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಲಷ್ಟೇ ಶಕ್ತವಾಯಿತು.

ದೀಪ್ತಿ ಶರ್ಮಾ ವಿಶ್ವ ದಾಖಲೆ​ ಈ ಪಂದ್ಯದಲ್ಲಿ ಒಂದು ವಿಕೆಟ್ ಪಡೆಯುವ ಮೂಲಕ ಭಾರತದ ಆಲ್‌ರೌಂಡರ್ ದೀಪ್ತಿ ಶರ್ಮಾ ಅವರು ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನ್ನುವ ವಿಶ್ವ ದಾಖಲೆ ಬರೆದಿದ್ದಾರೆ. ಆಸ್ಟ್ರೇಲಿಯಾದ ಮೆಗನ್ ಶಟ್ ಅವರನ್ನು ಹಿಂದಿಕ್ಕಿದ ದೀಪ್ತಿ, ಇದೀಗ 152 ವಿಕೆಟ್‌ಗಳೊಂದಿಗೆ ಅಗ್ರಸ್ಥಾನಕ್ಕೇರಿದ್ದಾರೆ.

2025ರ ವರ್ಷವು ಭಾರತೀಯ ಮಹಿಳಾ ಕ್ರಿಕೆಟ್‌ಗೆ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತದ್ದಾಗಿದೆ. ಏಕದಿನ ವಿಶ್ವಕಪ್ ಗೆದ್ದಿದ್ದ ಭಾರತ ತಂಡವು, ಇದೀಗ ಲಂಕಾ ವಿರುದ್ಧದ 5-0 ಸರಣಿ ಗೆಲುವಿನೊಂದಿಗೆ ವರ್ಷವನ್ನು ಅತ್ಯಂತ ಯಶಸ್ವಿಯಾಗಿ ಮುಗಿಸಿದೆ. ಸರಣಿದುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ ಶಫಾಲಿ ವರ್ಮಾ ‘ಸರಣಿ ಶ್ರೇಷ್ಠ’ ಪ್ರಶಸ್ತಿಗೆ ಭಾಜನರಾದರು.

ಅಂತರಾಷ್ಟ್ರೀಯ ಕ್ರೀಡೆ ರಾಷ್ಟ್ರೀಯ