
ಅಸಲಿಯಂತೆ ಕಾಣುವ ನಕಲಿ ಚಿನ್ನದ ಬಳೆಗಳನ್ನು ಅಡವಿಟ್ಟು ಸಾಲ ಪಡೆದು ವಂಚಿಸಿದ ಬಗ್ಗೆ ಇಬ್ಬರ ವಿರುದ್ದ ಮಹಿಳಾ ಸಹಕಾರಿ ಸಂಘದ ವ್ಯವಸ್ಥಾಪಕಿ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ನೆಲ್ಯಾಡಿ ನಿವಾಸಿಗಳಾದ ಸೆಬಾಸ್ಟಿಯನ್ ಹಾಗೂ ಡಾನಿಶ್ ಆರೋಪಿಗಳು. ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರಿ ಸಂಘದ ವ್ಯವಸ್ಥಾಪಕಿ ಚೈತನ್ಯ ಸಿ.ಹೆಚ್ ದೂರುದಾರೆ.
ಜ.27ರಂದು ಮಧ್ಯಾಹ್ನ ಆರೋಪಿಗಳಾದ ನೆಲ್ಯಾಡಿ ಗ್ರಾಮದ ನಿವಾಸಿ ಸೆಬಾಸ್ಟಿಯನ್ ಮತ್ತು ಡಾನಿಶ್ ಎಂಬವರು ಮೇಲ್ನೋಟಕ್ಕೆ ನಕಲಿ ಎಂದು ಕಂಡುಬಾರದಂತಹ ಒಟ್ಟು 30 ಗ್ರಾಂ ತೂಕದ 4 ನಕಲಿ ಬಳೆಗಳನ್ನು ಅಡಮಾನವಿರಿಸಿ, ಸಂಘದಿಂದ ರೂ. 1.40 ಲಕ್ಷ ಪಡೆದು ಮೋಸ ಮಾಡಿರುತ್ತಾರೆ ಎಂದು ದೂರು ನೀಡಿದ್ದಾರೆ. ಈ ದೂರಿನಂತೆ ಆರೋಪಿಗಳ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 16 /2024 ಕಲಂ: 406,420 ಹಾಗೂ ಸಹವಾಚ್ಯ 34 ರಂತೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
