ಕಣ್ಣೂರು (ಕೇರಳ): ಇಲ್ಲಿನ ಪ್ರಸಿದ್ಧ ಪಯ್ಯಂಬಲಂ ಬೀಚ್ನಲ್ಲಿ ಶನಿವಾರ ಭೀಕರ ಕಡಲ ಅಲೆಗಳ ಅಬ್ಬರಕ್ಕೆ ಸಿಲುಕಿ ಬೆಂಗಳೂರು ಮೂಲದ ಕಾಲೇಜು ವಿದ್ಯಾರ್ಥಿಯೊಬ್ಬರು ನಾಪತ್ತೆಯಾಗಿದ್ದಾರೆ. ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ಮತ್ತೊಬ್ಬ ಯುವಕನನ್ನು ಲೈಫ್ಗಾರ್ಡ್ ಸಿಬ್ಬಂದಿ ಯಶಸ್ವಿಯಾಗಿ ರಕ್ಷಿಸಿದ್ದಾರೆ. ನಾಪತ್ತೆಯಾದ ಯುವಕನಿಗಾಗಿ ಸದ್ಯ ತೀವ್ರ ಶೋಧ ಕಾರ್ಯ ನಡೆಯುತ್ತಿದೆ.

ನಾಪತ್ತೆಯಾದ ವಿದ್ಯಾರ್ಥಿಯನ್ನು ಬೆಂಗಳೂರು ಮೂಲದ ಸಂತೋಷ್ ಕುಮಾರ್ ಎಂದು ಗುರುತಿಸಲಾಗಿದೆ.
ಘಟನೆಯ ಹಿನ್ನೆಲೆ: ಲಭ್ಯವಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಕರ್ನಾಟಕದ ಪ್ರವಾಸಿಗರ ತಂಡವೊಂದು ಕೇರಳದ ಪ್ರಸಿದ್ಧ ಕೊಟ್ಟಿ ಯೂರು ದೇವಸ್ಥಾನಕ್ಕೆ ಧಾರ್ಮಿಕ ಪ್ರವಾಸ ಕೈಗೊಂಡಿತ್ತು. ದೇವರ ದರ್ಶನ ಮುಗಿಸಿಕೊಂಡು ವಾಪಸಾಗುತ್ತಿದ್ದ ಈ ತಂಡ, ಶನಿವಾರ ಮಧ್ಯಾಹ್ನ ಸುಮಾರು 12:30 ರ ವೇಳೆಗೆ ಕಣ್ಣೂರಿನ ಪಯ್ಯಂಬಲಂ ಬೀಚ್ಗೆ ಭೇಟಿ ನೀಡಿತ್ತು.
ಈ ಸಂದರ್ಭದಲ್ಲಿ ಸಮುದ್ರದಲ್ಲಿ ಅಲೆಗಳ ಅಬ್ಬರ ತೀವ್ರವಾಗಿತ್ತು ಎನ್ನಲಾಗಿದೆ. ತಂಡದಲ್ಲಿದ್ದ ಇಬ್ಬರು ಯುವಕರು ನೀರಿನ ಆಳಕ್ಕೆ ಇಳಿದಾಗ ಪ್ರಬಲ ಅಲೆಗಳ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯ ಲೈಫ್ಗಾರ್ಡ್ ಸಿಬ್ಬಂದಿ ಒಬ್ಬ ಯುವಕನನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಆದರೆ ಸಂತೋಷ್ ಕುಮಾರ್ ನೀರಿನಲ್ಲಿ ನಾಪತ್ತೆಯಾಗಿದ್ದಾರೆ.
ನೌಕಾಸೇನೆಯ ನೆರವು ಕೋರಿದ ಕೇರಳ ಸರ್ಕಾರ: ಘಟನೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಕೇರಳ ಪ್ರವಾಸೋದ್ಯಮ ಸಚಿವ ಪಿ.ಸಿ. ವಿಷ್ಣುನಾಥ್, “ಇದು ಅತ್ಯಂತ ದುರದೃಷ್ಟಕರ ಘಟನೆಯಾಗಿದೆ. ನಮ್ಮ ಲೈಫ್ಗಾರ್ಡ್ ಸಿಬ್ಬಂದಿ ಒಬ್ಬ ಯುವಕನನ್ನು ರಕ್ಷಿಸಿದ್ದಾರೆ. ನಾಪತ್ತೆಯಾಗಿರುವ ಮತ್ತೊಬ್ಬ ಯುವಕನಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಕಾರ್ಯಾಚರಣೆಯನ್ನು ಚುರುಕುಗೊಳಿಸಲು ನಾವು ಭಾರತೀಯ ನೌಕಾಸೇನೆಯ (Navy) ನೆರವನ್ನು ಕೋರಿದ್ದೇವೆ,” ಎಂದು ತಿಳಿಸಿದ್ದಾರೆ.
ಸುರಕ್ಷತಾ ಕ್ರಮಗಳ ಕೊರತೆಯ ಆರೋಪ: ಬೀಚ್ನಲ್ಲಿದ್ದ ಪ್ರತ್ಯಕ್ಷದರ್ಶಿಯೊಬ್ಬರು ಸ್ಥಳೀಯ ಆಡಳಿತ ಮತ್ತು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಕರ್ನಾಟಕದಿಂದ ಬಂದಿದ್ದ ಯುವಕರು ಇಲ್ಲಿ ಈಜಲು ಇಳಿದಾಗ ಈ ಅವಘಡ ಸಂಭವಿಸಿದೆ. ಯುವಕ ನೀರಿನಲ್ಲಿ ಮುಳುಗುತ್ತಿದ್ದಾಗ ಸುಮಾರು 20 ರಿಂದ 30 ನಿಮಿಷಗಳ ಕಾಲ ಸಹಾಯಕ್ಕಾಗಿ ಕಿರುಚಾಡುತ್ತಿದ್ದ. ಆದರೆ ತಕ್ಷಣಕ್ಕೆ ಯಾವುದೇ ರಕ್ಷಣಾ ಬೋಟ್ಗಳಾಗಲಿ ಅಥವಾ ಪೊಲೀಸರಾಗಲಿ ಸ್ಥಳಕ್ಕೆ ಬರಲಿಲ್ಲ. ಸೂಕ್ತ ಸುರಕ್ಷತಾ ವ್ಯವಸ್ಥೆ ಇಲ್ಲದಿರುವುದೇ ಇದಕ್ಕೆ ಕಾರಣ,” ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸ್ಥಳೀಯ ಅಧಿಕಾರಿಗಳು, ಕೋಸ್ಟ್ ಗಾರ್ಡ್ ಹಾಗೂ ನೌಕಾಸೇನೆಯ ಜಂಟಿ ನೇತೃತ್ವದಲ್ಲಿ ನಾಪತ್ತೆಯಾದ ಬೆಂಗಳೂರಿನ ವಿದ್ಯಾರ್ಥಿಗಾಗಿ ಸಮುದ್ರದಲ್ಲಿ ತೀವ್ರ ಶೋಧ ಕಾರ್ಯ ಮುಂದುವರಿದಿದೆ.

