KSRTC ಬಸ್‌ಗಳಲ್ಲಿ ಇನ್ಮುಂದೆ ತಂಬಾಕು ಜಾಹೀರಾತು ಇಲ್ಲ: ಸಚಿವ ರಾಮಲಿಂಗಾರೆಡ್ಡಿ ಮಹತ್ವದ ಆದೇಶ

KSRTC ಬಸ್‌ಗಳಲ್ಲಿ ಇನ್ಮುಂದೆ ತಂಬಾಕು ಜಾಹೀರಾತು ಇಲ್ಲ: ಸಚಿವ ರಾಮಲಿಂಗಾರೆಡ್ಡಿ ಮಹತ್ವದ ಆದೇಶ

ಬೆಂಗಳೂರು: ರಾಜ್ಯದ ಸಾರ್ವಜನಿಕ ಸಾರಿಗೆ ಸಂಸ್ಥೆಗಳ ಬಸ್‌ಗಳು ಹಾಗೂ ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ನೇರ ಅಥವಾ ಪರೋಕ್ಷ ಜಾಹೀರಾತುಗಳನ್ನು ಪ್ರದರ್ಶಿಸುವುದನ್ನು ನಿಷೇಧಿಸಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಶುಕ್ರವಾರ ಮಹತ್ವದ ಆದೇಶ ಹೊರಡಿಸಿದ್ದಾರೆ.

ರಾಜ್ಯದ ನಾಲ್ಕು ಸಾರಿಗೆ ನಿಗಮಗಳಾದ KSRTC, BMTC, NWKRTC ಮತ್ತು KKRTC ವ್ಯವಸ್ಥಾಪಕ ನಿರ್ದೇಶಕರಿಗೆ ಸಚಿವರು ಈ ಕುರಿತು ಅಧಿಕೃತ ಸೂಚನೆ ನೀಡಿದ್ದಾರೆ. ಸಾರ್ವಜನಿಕ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶಿಸಲಾಗಿದೆ.

​ಸಚಿವರ ಆದೇಶದಲ್ಲಿ ಏನಿದೆ? “ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ, ತಂಬಾಕು ಉತ್ಪನ್ನಗಳ ಸೇವನೆಯನ್ನು ಉತ್ತೇಜಿಸುವ ಯಾವುದೇ ರೀತಿಯ ನೇರ ಅಥವಾ ಪರೋಕ್ಷ ಜಾಹೀರಾತುಗಳನ್ನು ಬಸ್‌ಗಳ ಮೇಲೆ ಅಥವಾ ಬಸ್ ನಿಲ್ದಾಣಗಳ ಆವರಣದಲ್ಲಿ ಪ್ರದರ್ಶಿಸಬಾರದು ಎಂದು ನಾನು ನಿರ್ದೇಶಿಸುತ್ತಿದ್ದೇನೆ,” ಎಂದು ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

​ಈ ಹಿಂದೆಯೇ ಅನೇಕ ಸಾಮಾಜಿಕ ಹೋರಾಟಗಾರರು ಮತ್ತು ಆರೋಗ್ಯ ತಜ್ಞರು ಬಸ್‌ಗಳಲ್ಲಿ ತಂಬಾಕು ಜಾಹೀರಾತು ನೀಡದಂತೆ ಮನವಿ ಮಾಡಿದ್ದರು. ಸಚಿವರ ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಆರೋಗ್ಯ ಮತ್ತು ಸೌಂದರ್ಯ ರಾಜಕೀಯ ರಾಜ್ಯ