ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ರಾಮ ಜನ್ಮಭೂಮಿ ಮಂದಿರಕ್ಕೆ ಕರ್ನಾಟಕದ ಭಕ್ತರೊಬ್ಬರು ಸುಮಾರು 25 ರಿಂದ 30 ಕೋಟಿ ರೂಪಾಯಿ ಮೌಲ್ಯದ ಭವ್ಯ ರಾಮನ ವಿಗ್ರಹವನ್ನು ಕಾಣಿಕೆಯಾಗಿ ನೀಡಿದ್ದಾರೆ. ರತ್ನಖಚಿತವಾದ ಈ ವಿಗ್ರಹವು ಈಗ ಇಡೀ ದೇಶದ ಗಮನ ಸೆಳೆದಿದೆ.

10 ಅಡಿ ಎತ್ತರದ ರತ್ನಖಚಿತ ವಿಗ್ರಹ ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ, ಈ ವಿಗ್ರಹವು ಸುಮಾರು 10 ಅಡಿ ಎತ್ತರ ಮತ್ತು 8 ಅಡಿ ಅಗಲವಿದೆ. ದಕ್ಷಿಣ ಭಾರತದ ಅದ್ಭುತ ಶಿಲ್ಪಕಲೆಗೆ ಸಾಕ್ಷಿಯಾಗಿರುವ ಈ ವಿಗ್ರಹವನ್ನು ಚಿನ್ನದ ಲೇಪನ ಹಾಗೂ ವಜ್ರ, ವೈಢೂರ್ಯ, ಪಚ್ಚೆ ಮತ್ತು ನೀಲಮಣಿಗಳಂತಹ ಅಮೂಲ್ಯ ರತ್ನಗಳಿಂದ ಅಲಂಕರಿಸಲಾಗಿದೆ. ಮಂಗಳವಾರ ಸಂಜೆ ಬಿಗಿ ಭದ್ರತೆಯ ನಡುವೆ ವಿಮಾನದ ಮೂಲಕ ಈ ವಿಗ್ರಹವನ್ನು ಅಯೋಧ್ಯೆಗೆ ತರಲಾಗಿದೆ.

ಅನಾಮಧೇಯವಾಗಿ ಉಳಿದ ದಾನಿ: ಈ ಬೃಹತ್ ದೇಣಿಗೆ ನೀಡಿದ ಭಕ್ತರು ತಮ್ಮ ಹೆಸರನ್ನು ಬಹಿರಂಗಪಡಿಸಲು ಇಚ್ಛಿಸದೆ ಅನಾಮಧೇಯರಾಗಿ ಉಳಿದಿದ್ದಾರೆ. ಕರ್ನಾಟಕ ಮತ್ತು ಅಯೋಧ್ಯೆಯ ನಡುವಿನ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಸಂಬಂಧವನ್ನು ಈ ನಡೆ ಮತ್ತಷ್ಟು ಗಟ್ಟಿಗೊಳಿಸಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿದ ‘ರಾಮಲಲ್ಲಾ’ ಮೂರ್ತಿ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಿದ್ದು, ಈಗ ಕರ್ನಾಟಕದ ಮತ್ತೊಂದು ಕೊಡುಗೆ ಮಂದಿರದ ಮೆರುಗು ಹೆಚ್ಚಿಸಲಿದೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಸದಸ್ಯರು ವಿಗ್ರಹದ ಆಗಮನವನ್ನು ಖಚಿತಪಡಿಸಿದ್ದಾರೆ. ಸದ್ಯ ವಿಗ್ರಹದ ತಾಂತ್ರಿಕ ವಿವರಗಳು, ಲೋಹದ ತೂಕ ಮತ್ತು ಮೌಲ್ಯದ ಬಗ್ಗೆ ಅಧಿಕೃತ ಪರಿಶೀಲನೆ ನಡೆಯುತ್ತಿದೆ. ಈ ಪ್ರಕ್ರಿಯೆ ಮುಗಿದ ನಂತರ ವಿಗ್ರಹವನ್ನು ಮಂದಿರದ ಆವರಣದಲ್ಲಿ ಎಲ್ಲಿ ಪ್ರತಿಷ್ಠಾಪಿಸಬೇಕು ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಟ್ರಸ್ಟ್ ತಿಳಿಸಿದೆ.

