ಮಹಾರಾಷ್ಟ್ರದಲ್ಲಿ ಸೈಕ್ಲೋನ್ ಶಕ್ತಿ ಚಂಡಮಾರುತದ ಪರಿಣಾಮವಾಗಿ ತೀರ ಪ್ರದೇಶಗಳಲ್ಲಿ ಭಾರೀ ಮಳೆ ಮತ್ತು ಪ್ರವಾಹದ ಆತಂಕ ಉಂಟಾಗಿದೆ. ಮುಂಬೈ, ಥಾಣೆ, ಪಾಲ್ಘರ್, ರೈಗಡ, ರತ್ನಗಿರಿ ಹಾಗೂ ಸಿಂಧುದುರ್ಗ ಜಿಲ್ಲೆಗಳಿಗೆ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ. ಅಕ್ಟೋಬರ್ 3ರಿಂದ 7ರವರೆಗೆ ಮಧ್ಯಮದಿಂದ ಭಾರೀ ಚಂಡಮಾರುತದ ವಾತಾವರಣ ಇರಲಿದೆ ಎಂದು IMD ಅಂದಾಜಿಸಿದೆ.

ಮಹಾರಾಷ್ಟ್ರದ ಒಳನಾಡು ಪ್ರದೇಶಗಳಲ್ಲಿ, ವಿಶೇಷವಾಗಿ ಪೂರ್ವ ವಿದರ್ಭ ಮತ್ತು ಉತ್ತರ ಕೊಂಕಣ ಭಾಗಗಳಲ್ಲಿ, ಭಾರೀ ಮಳೆಯಾಗುವ ಸಾಧ್ಯತೆ ಇದೆ. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗುವ ಅಪಾಯವಿದ್ದು, ಪ್ರವಾಹದ ಸಾಧ್ಯತೆಗಳೂ ಹೆಚ್ಚಾಗಿವೆ.
ಕರ್ನಾಟಕಕ್ಕೂ ಇರಲಿದೆಯೇ ‘ಶಕ್ತಿ’ ಪರಿಣಾಮ?
ಮಹಾರಾಷ್ಟ್ರ ಕರಾವಳಿಗೆ ಅಪ್ಪಳಿಸಿರುವ “ಶಕ್ತಿ” ಚಂಡಮಾರುತದ ಪರಿಣಾಮವಾಗಿ ರಾಜ್ಯಾದ್ಯಂತ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ.
ಕರಾವಳಿ ಪ್ರದೇಶಗಳಲ್ಲಿ ಮಳೆ ಹಾಗೂ ಗಾಳಿ ಪ್ರಬಲವಾಗಿರುವುದರಿಂದ ಮೀನುಗಾರರು ಸಮುದ್ರಕ್ಕೆ ತೆರಳಬಾರದು ಎಂದು ಸೂಚನೆ ನೀಡಲಾಗಿದೆ.ಇದರ ನಡುವೆ, ಕರ್ನಾಟಕದಲ್ಲಿಯೂ ಚಂಡಮಾರುತದ ಅಪ್ರತ್ಯಕ್ಷ ಪರಿಣಾಮದಿಂದ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.
ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯ ಸಾಧ್ಯತೆ ವ್ಯಕ್ತವಾಗಿದೆ. ಉತ್ತರ ಒಳನಾಡು ಜಿಲ್ಲೆಗಳಲ್ಲಿಯೂ ಹಗುರದಿಂದ ಮಧ್ಯಮ ಮಳೆ ಸುರಿಯುವ ನಿರೀಕ್ಷೆ ಇದೆ.ಕೆಲವು ಪ್ರದೇಶಗಳಲ್ಲಿ ಬಿರುಗಾಳಿ ಹಾಗೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇರುವುದರಿಂದ ಜನರು ಎಚ್ಚರಿಕೆಯಿಂದ ಇರಲು ಇಲಾಖೆಯು ಮನವಿ ಮಾಡಿದೆ. ಸರ್ಕಾರವು ವಿಪತ್ತು ನಿರ್ವಹಣಾ ಕ್ರಮಗಳನ್ನು ಸಕ್ರಿಯಗೊಳಿಸಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತಗಳಿಗೆ ನಿರ್ದೇಶನ ನೀಡಿದೆ.
ಇದಕ್ಕೂ ಮುನ್ನವೇ ಅಕ್ಟೋಬರ್ ತಿಂಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು IMD ಎಚ್ಚರಿಕೆ ನೀಡಿತ್ತು. ಹೀಗಾಗಿ ಸರ್ಕಾರ ಮತ್ತು ನಾಗರಿಕರು ಜಾಗೃತೆಯಿಂದ ಇರಬೇಕೆಂದು ಇಲಾಖೆ ಮನವಿ ಮಾಡಿದೆ.

