ಜಾತಿಗಣತಿ ವಿವಾದ: 33 ಕ್ರಿಶ್ಚಿಯನ್ ಜಾತಿ ನಮೂನೆಯಿಂದ ಕೈಬಿಟ್ಟ ಸರ್ಕಾರ

ಜಾತಿಗಣತಿ ವಿವಾದ: 33 ಕ್ರಿಶ್ಚಿಯನ್ ಜಾತಿ ನಮೂನೆಯಿಂದ ಕೈಬಿಟ್ಟ ಸರ್ಕಾರ

ಬೆಂಗಳೂರು, ಸೆಪ್ಟೆಂಬರ್ 21: ರಾಜ್ಯದಲ್ಲಿ ಜಾತಿಗಣತಿ ಪ್ರಕ್ರಿಯೆ ಆರಂಭಕ್ಕೂ ಮುನ್ನವೇ ದೊಡ್ಡ ವಿವಾದ ಸೃಷ್ಟಿಯಾಗಿದ್ದು, ಸಮುದಾಯಗಳ ತೀವ್ರ ವಿರೋಧದ ಬೆನ್ನಲ್ಲೇ ಸರ್ಕಾರ 46 ಕ್ರಿಶ್ಚಿಯನ್ ಜಾತಿಗಳ ಪೈಕಿ 33 ಜಾತಿಗಳನ್ನು ಜಾತಿಗಣತಿ ನಮೂನೆಯಿಂದ ಕೈಬಿಟ್ಟಿದೆ. ಈ ಕುರಿತು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್ ಮತ್ತು ಆಯುಕ್ತ ದಯಾನಂದ ಮಾಹಿತಿ ನೀಡಿದರು.

ಮಧುಸೂದನ್ ನಾಯಕ್ ಅವರು ಮಾತನಾಡಿ, “ಹಿಂದಿನ ಸಮೀಕ್ಷೆಗಳಲ್ಲಿ ಕೆಲವು ಕ್ರಿಶ್ಚಿಯನ್ ಜಾತಿಗಳು ಸೇರಿಸಲ್ಪಟ್ಟಿದ್ದವು. ಆದರೆ ಇದೀಗ ಗೊಂದಲಕ್ಕೆ ಕಾರಣವಾಗುವ ಕೆಲವು ಹೆಸರುಗಳನ್ನು ಕೈಬಿಡಲಾಗಿದೆ. ಪ್ರಾಟೆಸ್ಟೆಂಟ್ ಕ್ರೈಸ್ತ, ಸಿರಿಯನ್ ಕ್ರೈಸ್ತ, ಎಸ್‌ಸಿ ಮತಾಂತರ ಕ್ರೈಸ್ತ ಮುಂತಾದವುಗಳನ್ನು ಮಾತ್ರ ಉಳಿಸಲಾಗಿದೆ. ಉಳಿದ 33 ಕ್ರಿಶ್ಚಿಯನ್ ಜಾತಿಗಳನ್ನು ಡ್ರಾಪ್‌ಔಟ್ ಮಾಡಲಾಗಿದೆ” ಎಂದು ಸ್ಪಷ್ಟಪಡಿಸಿದರು.

ಅಧಿಕಾರಿಗಳ ಸ್ಪಷ್ಟನೆ:

  • ಸಮೀಕ್ಷೆಯಲ್ಲಿ 1561 ಅಧಿಕೃತ ಜಾತಿಗಳ ಪಟ್ಟಿ ಇದೆ.
  • ನಾಗರಿಕರು ತಮ್ಮ ಇಚ್ಛೆಯಂತೆ ಜಾತಿ ಬರೆಸಬಹುದು. “ಇತರ” ಎಂಬ ಕಾಲಮ್ ಕೂಡ ನೀಡಲಾಗಿದೆ.
  • ಕ್ರಿಶ್ಚಿಯನ್ ಒಕ್ಕಲಿಗ ಅಥವಾ ಕ್ರಿಶ್ಚಿಯನ್ ಲಿಂಗಾಯತ ಎಂದು ಬರೆಸುವಂತಿದೆ. ಆದರೆ ಪ್ರತ್ಯೇಕವಾಗಿ ಪಟ್ಟಿಯಲ್ಲಿ ಪಬ್ಲಿಕ್ ಮಾಡುವುದಿಲ್ಲ.
  • ಮತಾಂತರವಾದವರು ತಮ್ಮ ಮತಾಂತರಿತ ಧರ್ಮದಲ್ಲೇ ಪರಿಗಣಿಸಲ್ಪಡುತ್ತಾರೆ; ಮೂಲ ಜಾತಿ ಅವರಿಗೆ ಅನ್ವಯಿಸುವುದಿಲ್ಲ.

ಆಯೋಗದ ಪ್ರಕಾರ, ಜಾತಿಗಣತಿ ಸಮೀಕ್ಷೆಯ ನಂತರ ತಜ್ಞರು ಎಲ್ಲಾ ಅಂಕಿಅಂಶಗಳನ್ನು ಪರಿಶೀಲಿಸಿ, ಯಾವ ಜಾತಿ ಯಾವ ವರ್ಗಕ್ಕೆ ಬರುತ್ತದೆ ಎಂಬುದನ್ನು ನಿಗದಿಪಡಿಸಲಿದ್ದಾರೆ.

ಈ ನಿರ್ಧಾರದಿಂದ ಕ್ರಿಶ್ಚಿಯನ್ ಸಮುದಾಯಗಳಲ್ಲಿ ಅಸಮಾಧಾನ ಮೂಡಿದರೆ, ಮತ್ತೊಂದೆಡೆ ಆಯೋಗ “ಇದು ಕೇವಲ ತಾಂತ್ರಿಕ ತಿದ್ದುಪಡಿ, ಯಾವುದೇ ಸಮುದಾಯವನ್ನು ಹೊರತುಪಡಿಸುವ ಉದ್ದೇಶವಿಲ್ಲ” ಎಂದು ಸ್ಪಷ್ಟಪಡಿಸಿದೆ.

ರಾಜ್ಯ