ಬೆಂಗಳೂರು: ನಗರದ ಪುಲಕೇಶಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪಾಟರೀ ರಸ್ತೆಯ ಕ್ಲಾರೆನ್ಸ್ ಶಾಲೆಗೆ ಗುರುವಾರ ಬೆಳಿಗ್ಗೆ ಬಾಂಬ್ ಬೆದರಿಕೆ ಸಂದೇಶವೊಂದು ಇಮೇಲ್ ಮುಖಾಂತರ ಬಂದಿದೆ.ಇದನ್ನು ತಕ್ಷಣ ಗಮನಿಸಿದ ಶಾಲಾ ಆಡಳಿತ ಮಂಡಳಿ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ತಂಡವನ್ನು ಸಂಪರ್ಕಿಸಿದ್ದು, ಸ್ಥಳಕ್ಕೇ ಧಾವಿಸಿದ ಪೊಲೀಸರು ಶಾಲಾ ಆವರಣವನ್ನು ಮುಚ್ಚಿ ಪರಿಶೀಲನೆ ನಡೆಸಿದರು. ಈ ಪರಿಶೀಲನೆ ಬಳಿಕ ಯಾವುದೇ ಸ್ಪೋಟಕ ಸಾಮಗ್ರಿ ಪತ್ತೆಯಾಗಿಲ್ಲ ಎಂದು ಪೊಲೀಸರು ದೃಢಪಡಿಸಿದ್ದಾರೆ.


ಜೂನ್ 16ರಂದು, ಬೆಂಗಳೂರು ಸೇರಿದಂತೆ ಹಾಸನ ಮತ್ತು ಉಡುಪಿ ಜಿಲ್ಲೆಗಳ ಕೆಲವು ಶಾಲೆಗಳಿಗೆ ಇಂಥವೇ ಇಮೇಲ್ ಬೆದರಿಕೆಗಳು ಬಂದಿದ್ದವು. ಆದರೆ ಅವು ಕೂಡ ಸುಳ್ಳು ಎಂಬುದು ಅಧಿಕಾರಿಗಳ ತನಿಖೆಯಲ್ಲಿ ಪತ್ತೆಯಾಯಿತು.ಇಂತಹ ಬೆದರಿಕೆ ಇಮೇಲ್‌ಗಳನ್ನು ಗಂಭೀರವಾಗಿ ತೆಗೆದುಕೊಳ್ಳಲಾಗುತ್ತಿದ್ದು, ತಪ್ಪಿತಸ್ಥರಿಗೆ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುತ್ತದೆ ಪೊಲೀಸರು ತಿಳಿಸಿದ್ದಾರೆ.