ಹೊಟ್ಟೆನೋವೆಂದು ಆಸ್ಪತ್ರೆಗೆ ದಾಖಲಾದ 19ವರ್ಷದ ಯುವಕ :ಚಿಕಿತ್ಸೆ ಪಲಕಾರಿಯಾಗದೆ ಮೃತ್ಯು:ವೈದ್ಯಾಧಿಕಾರಿಗಳ ನಿರ್ಲಕ್ಷತನದ ಆರೋಪ,ದೂರು ದಾಖಲು

ಹೊಟ್ಟೆನೋವೆಂದು ಆಸ್ಪತ್ರೆಗೆ ದಾಖಲಾದ 19ವರ್ಷದ ಯುವಕ :ಚಿಕಿತ್ಸೆ ಪಲಕಾರಿಯಾಗದೆ ಮೃತ್ಯು:ವೈದ್ಯಾಧಿಕಾರಿಗಳ ನಿರ್ಲಕ್ಷತನದ ಆರೋಪ,ದೂರು ದಾಖಲು

 

ಸುಳ್ಯ :ಹೊಟ್ಟೆನೋವಿನಿಂದ ಬಳಲುತ್ತಿದ್ದ ಯುವಕನೊಬ್ಬ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಮೇ.8 ರಂದು  ಬೆಳ್ಳಾರೆ ಠಾಣಾ ವ್ಯಾಪ್ತಿಯ  ಕೊಡಿಯಾಲ ಗ್ರಾಮದಿಂದ ವರದಿಯಾಗಿದೆ.

ಪೋನಡ್ಕ ಮನೆ ತಿಮ್ಮಪ್ಪ ಎಂಬವರ ಪುತ್ರ ನಿತಿನ್ ಕುಮಾರ್ (19) ಎಂಬ ಯುವಕ ಮೃತಪಟ್ಟಿದ್ದು, ಈ ಬಗ್ಗೆ ಖಾಸಗಿ ಆಸ್ಪತ್ರೆಗಳ ವೈದ್ಯಾಧಿಕಾರಿಗಳು ನಿರ್ಲಕ್ಷತನದ ಚಿಕಿತ್ಸೆ ನೀಡಿದ ಪರಿಣಾಮ ಯುವಕ ಮೃತಪಟ್ಟಿರುವುದಾಗಿ ಯುವಕನ ತಂದೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ನಿತಿನ್ ಕುಮಾರ್ ದ್ವಿತೀಯ ಪಿಯುಸಿ ವ್ಯಾಸಂಗ ಮುಗಿಸಿದ್ದು ಬೆಳ್ಳಾರೆ ಯ ಕಂಪ್ಯೂಟರ್ ಸೆಂಟರ್ ನಲ್ಲಿ ಕಂಪ್ಯೂಟರ್ ಕಲಿಯುತ್ತಿದ್ದರು. 4-5 ದಿನಗಳಿಂದ ಹೊಟ್ಟೆನೋವು ಕಾಣಿಸಿಕೊಂಡ ಕಾರಣ  ಕಾಣಿಯೂರು ಅಶ್ವಿನಿ ಕ್ಲಿನಿಕ್ ಗೆ ಹೋಗಿದ್ದರು.  ಅಲ್ಲಿ ವೈದ್ಯರು ಪರೀಕ್ಷಿಸಿ ಸ್ಕ್ಯಾನಿಂಗ್ ಮಾಡಲು ಹೇಳಿದ್ದರು.ಬಳಿಕ ಪುತ್ತೂರಲ್ಲಿ ಸ್ಕ್ಯಾನಿಂಗ್ ಮಾಡಿಸಿದಾಗ ಸಣ್ಣ ಗಾತ್ರದ ಕಿಡ್ನಿ ಸ್ಟೋನ್ ಇರುವುದಾಗಿ ತಿಳಿಸಿದ್ದು ನಂತರ ಮನೆಗೆ ಬಂದಿದ್ದರು.

ಅದೇ ದಿನ ರಾತ್ರಿ ಹೊಟ್ಟೆನೋವು ಉಲ್ಬಣಿಸಿದ ಪರಿಣಾಮ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ವಾಪಾಸು ಮನೆಗೆ ಬಂದಿದ್ದರು. ಮದ್ಯಾಹ್ನ ಹೊಟ್ಟೆನೋವು ಪುನ: ಜೋರಾದಾಗ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಶಸ್ತ್ರ ಚಿಕಿತ್ಸೆ ನಡೆಸಿದ್ದು ಬಳಿಕ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಿದ ಮೇರೆಗೆ ಆಂಬ್ಯುಲೆನ್ಸ್ ನಲ್ಲಿ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು ಯುವಕ ಮೃತಪಟ್ಟಿರುವುದಾಗಿ ತಿಳಿಸಿದರೆನ್ನಲಾಗಿದೆ.

ಇದರಿಂದ ಮಗನ ಸಾವಿಗೆ ವೈದ್ಯರುಗಳ ನಿರ್ಲಕ್ಷ್ಯವೇ ಕಾರಣವೆಂದು ಯುವಕನ ತಂದೆ ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ಹೇಳಲಾಗಿದೆ.

ರಾಜ್ಯ