ಮಂಗಳೂರಿನಿಂದ ಹೊರಟ ಸರಕು ಹಡಗಿನ ಮೇಲೆ ಕ್ಷಿಪಣಿ ದಾಳಿ

ಮಂಗಳೂರಿನಿಂದ ಹೊರಟ ಸರಕು ಹಡಗಿನ ಮೇಲೆ ಕ್ಷಿಪಣಿ ದಾಳಿ

ಮಂಗಳೂರು: ಮಂಗಳೂರಿನಿಂದ ಶೆಲ್‌ ಕಂಪೆನಿಯ ವೈಮಾನಿಕ ಇಂಧನವನ್ನು ಹೊತ್ತು ನೆದರ್ಲೆಂಡ್‌ಗೆ ತೆರಳುತ್ತಿದ್ದ ಸರಕು ಹಡಗಿನ ಮೇಲೆ ಯೆಮೆನ್‌ ಸಮೀಪ ಕಡಲ್ಗಳ್ಳರು ಕ್ಷಿಪಣಿ ದಾಳಿ ನಡೆಸಿದ್ದಾರೆ.

ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಉತ್ಪಾದನೆಯಾದ ವೈಮಾನಿಕ ಇಂಧನವನ್ನು ಶೆಲ್‌ ಕಂಪೆನಿಯು ಖರೀದಿಸಿ ಡಿ.6 ರಂದು ನೆದರ್ಲೆಂಡ್‌ಗೆ ಸಾಗಾಟ ಮಾಡುತ್ತಿತ್ತು. ಈ ವೇಳೆ ಕಡಲ್ಗಳ್ಳರು ದಾಳಿ ನಡೆಸಿದ್ದಾರೆ. ಆದರೆ ಅದೃಷ್ಟವಶಾತ್‌ ಕಡಲ್ಗಳ್ಳರ ಗುರಿ ತಪ್ಪಿದ ಪರಿಣಾಮ ಹಡಗಿಗೆ ಯಾವುದೇ ಅಪಾಯವಾಗಿಲ್ಲ. ಹಡಗು-ಸಿಬಂದಿ ಸುರಕ್ಷಿತವಾಗಿದ್ದಾರೆ ಎಂದು ಮೂಲ ಗಳು ತಿಳಿಸಿವೆ.

ಇನ್ನು ಈ ಘಟನೆ ನಡೆದ ಸಂದರ್ಭದಲ್ಲಿ ಸಮೀಪದಲ್ಲಿ ಇದ್ದ ಅಮೆರಿಕದ ಸಮರ ನೌಕೆ ಶಂಕಿತ ಹೌದಿ ಡ್ರೋನ್ ಅನ್ನು ಹೊಡೆದುರುಳಿಸಿದೆ ಎಂದೂ ವರದಿ ತಿಳಿಸಿದೆ.

ಮಂಗಳೂರಿನಿಂದ ವಿವಿಧ ಕಂಪೆನಿಗಳ ಸರಕು ತುಂಬಿದ ಹಡಗುಗಳು ನಿತ್ಯ ಸಂಚರಿಸುತ್ತವೆ. ಈ ಪೈಕಿ ಬಹುತೇಕ ಹಡಗುಗಳು ತಲುಪಲಿರುವ ಕೊನೆಯ ನಿಲ್ದಾಣದ ಬಗ್ಗೆ ಇಲ್ಲಿ ಮಾಹಿತಿ ಇರುವುದಿಲ್ಲ. ಯಾಕೆಂದರೆ ಆ ಹಡಗುಗಳು ವಯಾ ದೇಶ-ವಿದೇಶದ ಇತರ ಬಂದರಿಗೆ ಹೋಗಿ ಅಲ್ಲಿಂದ ಸರಕು ತುಂಬಿಸಿಕೊಂಡು ಇತರ ಕಡೆಗೆ ಹೋಗುತ್ತವೆ. ಹೀಗಾಗಿ ಯೆಮೆನ್‌ ಸಮೀಪ ಗುರಿ ತಪ್ಪಿದ ಕ್ಷಿಪಣಿ ದಾಳಿಗೆ ಒಳಗಾದ ಹಡಗಿನ ವಿವರ ನಿರೀಕ್ಷಿಸಲಾಗುತ್ತಿದೆ ಎಂದು ನವ ಮಂಗಳೂರು ಬಂದರು ಪ್ರಾಧಿಕಾರದ ಮೂಲಗಳು ತಿಳಿಸಿವೆ.

ರಾಜ್ಯ