
ಸುಳ್ಯ : ಕಾಂಗ್ರೆಸ್ ನಲ್ಲಿ ಇತ್ತೀಚೆಗೆ ಸುಳ್ಯ ಮತ್ತು ಕಡಬ ಭಾಗದಿಂದ ಹಲವು ಕಾರ್ಯಕರ್ತರ ಉಚ್ಛಾಟನೆ ಕ್ರಮಕ್ಕೆ ಒಳಗಾಗಿರುವವರ ಗುಂಪೊಂದು ಪ್ರತ್ಯೇಕ ಸಭೆಯೊಂದನ್ನು ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಉಚ್ಚಾಟಿತ ಕಾಂಗ್ರೇಸ್ ನಾಯಕ ಮಹೇಶ್ ಕರಿಕ್ಕಳ ಮನೆಯಲ್ಲಿ ಗುಂಪು ಸೇರಿದ ತಂಡ ಬ್ಲಾಕ್ ಕ್ರಮಕ್ಕೆ ತೀವ್ರ ಅಸಮಧಾನ ಹೊರಹಾಕಿದ್ದಾರೆ.

ಈ ಸಭೆಯಲ್ಲಿ ಶೋಕಾಸ್ ನೋಟೀಸ್ ಪಡೆದಿರುವ ಕೆಲವು ನಾಯಕರ ಸಹಿತ ಹಲವು ಮಂದಿ ಪಾಲ್ಗೊಂಡಿದ್ದು
ಕೆಪಿಸಿಸಿ ಸುಳ್ಯ ಉಸ್ತುವಾರಿ ನಂದಕುಮಾರ್ ಕೂಡ ಈ ಸಭೆಯಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ.

ಸಭೆಯಲ್ಲಿ ಮಾತನಾಡಿರುವ ಮುಖಂಡರುಗಳು ಇಲ್ಲಿ ಉಚ್ಛಾಟಿತರಾದವರು ಮತ್ತು ಶೋಕಾಸ್ ನೋಟೀಸ್ ಪಡೆದಿರುವವರು ಸಮರ್ಪಣಾ ಭಾವದಿಂದ ಪಕ್ಷಕ್ಕೆ ದುಡಿದ ಕಾರ್ಯಕರ್ತರಾಗಿದ್ದಾರೆ. ಯಾವುದೋ ಎರಡು ಮೂರು ಮಂದಿ ಕಾಣದ ಕೈಗಳ ಕೆಲಸದಿಂದಾಗಿ ಈ ರೀತಿಯ ಗೊಂದಲ ಆಗಿದೆ.ಈ ಬಗ್ಗೆ ನಾವು ಮುಂದೆ ಏನು ಮಾಡಬೇಕೆಂಬುದನ್ನು ಸಭೆಯಲ್ಲಿ ತೀರ್ಮಾನಿಸಿ ಮುನ್ನಡೆಯುತ್ತೇವೆ.ಅಲ್ಲದೆ
ಪಕ್ಷಕ್ಕಾಗಿ ದುಡಿದ ನಾಯಕರನ್ನು ಉಚ್ಚಾಟನೆ ಮಾಡಿದ ಬ್ಲಾಕ್ ಅಧ್ಯಕ್ಷರನ್ನು ಬದಲಾಯಿಸಬೇಕೆಂದು ಈ ಸಭೆಯ ಮೂಲಕ ನಾವು ಆಗ್ರಹಿಸುತ್ತೇವೆ .ಸುಳ್ಯ ವಿಧಾನ ಸಭಾ ಕ್ಷೇತ್ರಕ್ಕೆ ಬಂದು ಕಾಂಗ್ರೆಸ್ನ್ನು ಒಡೆಯಲು ಮುಂದಾದ, ಗೊಂದಲಕ್ಕೆ ಕಾರಣವಾದ ಕೃಷ್ಣಪ್ಪರನ್ನು ಇನ್ನು ಮುಂದೆ ಸುಳ್ಯಕ್ಕೆ ಬರದಂತೆ ತಡೆಯಬೇಕು. ಮತ್ತು ಕೃಷ್ಣಪ್ಪ ಹಠಾವೋ, ಸುಳ್ಯ ಕಾಂಗ್ರೆಸ್ ಬಚಾವೋ ಎಂಬ ಅಭಿಯಾನಕ್ಕೂ ಮುಂದಿನ ಹೋರಾಟ ನಡೆಯಲಿದೆ ಎಂದು ಸಭೆಯಲ್ಲಿ ತೀರ್ಮಾನಗಳನ್ನು ಕೈಗೊಂಡಿದ್ದಾರೆ ಎನ್ನಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ನೈಜ ವಿಚಾರವನ್ನು ಅವರಿಗೆ ಮನದಟ್ಟು ಮಾಡಬೇಕು. ನಂದಕುಮಾರರನ್ನು ಸುಳ್ಯದ ಉಸ್ತುವಾರಿಯಾಗಿ ನೇಮಿಸಬೇಕು. ನಂದಕುಮಾರ್ ಅಭಿಮಾನಿಗಳು ಒಟ್ಟಾಗಿ ಸಮಾವೇಶ ನಡೆಸಬೇಕು ಎಂಬಿತ್ಯಾದಿ ನಿರ್ಧಾರಗಳನ್ನು ಸಭೆಯಲ್ಲಿ ಕೈಗೊಳ್ಳಲಾಯಿತೆಂದು ತಿಳಿದುಬಂದಿದೆ.
ಸಭೆಯಲ್ಲಿ ಬಾಲಕೃಷ್ಣ ಬಳ್ಳೇರಿ, ಮಹೇಶ್ ಕುಮಾರ್ ಕರಿಕ್ಕಳ, ಎಚ್.ಎಂ. ನಂದಕುಮಾರ್, ಪ್ರವೀಣ್ ಕುಮಾರ್ ಕೆಡೆಂಜಿಗುತ್ತು, ಕೆ. ಗೋಕುಲ್ ದಾಸ್, ಸಚಿನ್ ರಾಜ್ ಶೆಟ್ಟಿ ಪೆರುವಾಜೆಗುತ್ತು, ಆಶಾ ಲಕ್ಷ್ಮಣ್, ಶಶಿಧರ ಎಂ.ಜೆ, ಮೊಹಮ್ಮದ್ ಪೈಝಲ್, ಭವಾನಿ ಶಂಕರ ಕಲ್ಮಡ್ಕ, ಚೇತನ್ ಕಜಗದ್ದೆ, ಬಶೀರ್ ಅಹ್ಮದ್, ರವೀಂದ್ರ ಕುಮಾರ್ ರುದ್ರಪಾದ, ಜಗನ್ನಾಥ ಪೂಜಾರಿ ಮುಕ್ಕೂರು, ಕಮಲಾಕ್ಷ ಪಿ, ಶೇಖರ, ರಾಮಕೃಷ್ಣ ಡಿ ಹೊಳ್ಳಾರು, ಶೋಭಿತ್ ಎಂ. ನಾರಾಯಣ, ಗೋಪಾಲಕೃಷ್ಣ ಭಟ್ ನೂಚಿಲ, ಬಾಲಕೃಷ್ಣ ಮರೀಲ್, ಕ್ಷೇಬಿಯರ್ ಬೀಬಿ, ಸಂದೇಶ್ ಚಾರ್ವಕ ಮೊದಲಾದವರು ಉಪಸ್ಥಿತರಿದ್ದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಭೆಯ ಕೊನೆಯಲ್ಲಿ ಮಾತಾಡಿರುವ ಕೆಪಿಸಿಸಿ ಸಂಯೋಜಕ ನಂದಕುಮಾರ್ ಮುಖಂಡರುಗಳಿಗೆ ಕಾರ್ಯಕರ್ತರಿಗೆ ಶೋಕಾಸ್ ನೋಟೀಸ್ ನೀಡಿರುವ ಬಗ್ಗೆ ಯಾರೂ ಚಿಂತಿತರಾಗುವುದು ಬೇಡ. ನಾನು ನಿಮ್ಮೊಂದಿಗಿದ್ದೇನೆ. ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಪರಿಹಾರ ಕಂಡುಕೊಳ್ಳೋಣ ಎಂದು ಧೈರ್ಯ ತುಂಬಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ ರಾಜ್ಯದಲ್ಲಿ ಕಾಂಗ್ರೇಸ್ ಅಧಿಕಾರದಲ್ಲಿದ್ದು ಸರಕಾರದ ಯೋಜನೆಗಳನ್ನು ಮನೆ ಮನೆ ತಲುಪಿಸಿ ಊರು ಅಭಿವೃದ್ದಿ ಮಾಡಬೇಕಾದ ಕಾಂಗ್ರೇಸಿಗರು ಎರಡು ಬಣಗಳಾಗಿ ತಮ್ಮೊಳಗೆ ಕಚ್ಚಾಡುತ್ತಾ ಕಾಲ ಹರಣ ಮಾಡುತ್ತಿರುವುದು ಮತದಾರರ ಆಕ್ರೋಶಕ್ಕೆ ಕಾರಣವಾಗಿದೆ.


