ಅರಣ್ಯ ಇಲಾಖೆಯಿಂದ ಹೊಸ ಎಸ್‌ಒಪಿ ಬಿಡುಗಡೆ: ಅರಣ್ಯ ಟ್ರೆಕ್ಕಿಂಗ್‌ಗೆ ಕಟ್ಟುನಿಟ್ಟಿನ ಸುರಕ್ಷತಾ ನಿಯಮಗಳು ಜಾರಿ!

ಅರಣ್ಯ ಇಲಾಖೆಯಿಂದ ಹೊಸ ಎಸ್‌ಒಪಿ ಬಿಡುಗಡೆ: ಅರಣ್ಯ ಟ್ರೆಕ್ಕಿಂಗ್‌ಗೆ ಕಟ್ಟುನಿಟ್ಟಿನ ಸುರಕ್ಷತಾ ನಿಯಮಗಳು ಜಾರಿ!

ಬೆಂಗಳೂರು:ರಾಜ್ಯದ ವಿವಿಧ ಅರಣ್ಯ ಪ್ರದೇಶಗಳು ಹಾಗೂ ಚಾರಣ ಮಾರ್ಗಗಳಲ್ಲಿ ಸಂಭವಿಸುತ್ತಿರುವ ಆಕಸ್ಮಿಕ ಅವಘಡಗಳನ್ನು ತಡೆಯಲು ಮತ್ತು ಪರಿಸರ ಸಮತೋಲನವನ್ನು ಕಾಯ್ದುಕೊಳ್ಳಲು ಕರ್ನಾಟಕ ಅರಣ್ಯ ಇಲಾಖೆ ಹೊಸದಾಗಿ ಕಟ್ಟುನಿಟ್ಟಿನ ಪ್ರಮಾಣಿತ ಕಾರ್ಯಾಚರಣೆ ವಿಧಾನ (SOP – Standard Operating Procedure) ಹಾಗೂ ಸುರಕ್ಷತಾ ಚೌಕಟ್ಟನ್ನು ಬಿಡುಗಡೆ ಮಾಡಿದೆ.

ಪಶ್ಚಿಮ ಘಟ್ಟಗಳು ಸೇರಿದಂತೆ ರಾಜ್ಯದಲ್ಲಿ ಸುಮಾರು 39 ಅಧಿಕೃತ ಟ್ರೆಕ್ಕಿಂಗ್ ಮಾರ್ಗಗಳಿವೆ. ಇತ್ತೀಚೆಗೆ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಚಿರತೆ ದಾಳಿ, ಕೊಡಗಿನ ತಡಿಯಂಡಮೋಳಿನಲ್ಲಿ ಚಾರಣಿಗರು ದಾರಿ ತಪ್ಪಿದ ಘಟನೆ ಮತ್ತು ಚಿಕ್ಕಮಗಳೂರಿನ ಬಂಡಾಜೆ ಜಲಪಾತದ ಬಳಿ ಸಂಭವಿಸಿದ ತುರ್ತು ಪರಿಸರ ಸನ್ನಿವೇಶಗಳನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆ, ಈ ಹೊಸ ನಿಯಮಾವಳಿಗಳನ್ನು ರೂಪಿಸಿದೆ.

ಹೊಸ SOPಯ ಪ್ರಮುಖ ಮುಖ್ಯಾಂಶಗಳು ಹಾಗೂ ಸುರಕ್ಷತಾ ಕ್ರಮಗಳು

  • ದೈನಂದಿನ ಪ್ರವೇಶ ಮಿತಿ: ಚಾರಣ ಮಾರ್ಗಗಳಲ್ಲಿ ಅತಿಯಾದ ಜನದಟ್ಟಣೆ ತಡೆಯಲು ಪ್ರತಿಯೊಂದು ಮಾರ್ಗಕ್ಕೂ ದಿನಕ್ಕೆ ಇಂತಿಷ್ಟೇ ಚಾರಣಿಗರಿಗೆ ಮಾತ್ರ ಪ್ರವೇಶ ನೀಡಲು ನಿರ್ಧರಿಸಲಾಗಿದೆ.
  • ಸ್ಥಳೀಯ ಗೈಡ್‌ಗಳ ಕಡ್ಡಾಯ ನೇಮಕ: ಸ್ಥಳೀಯ ಯುವಕರಿಗೆ ಜೀವವೈವಿಧ್ಯತೆ, ಮಾರ್ಗ ಸೂಕ್ಷ್ಮತೆ ಹಾಗೂ ತುರ್ತು ನಿರ್ವಹಣೆ ಕುರಿತು ತರಬೇತಿ ನೀಡಿ, ಪ್ರತಿಯೊಂದು ಟ್ರೆಕ್ಕಿಂಗ್ ತಂಡದ ಜೊತೆಗೆ ಗೈಡ್ ಆಗಿ ಕಳುಹಿಸಲಾಗುತ್ತದೆ.
  • GPS ಟ್ರ್ಯಾಕಿಂಗ್ ಹಾಗೂ ಕಮ್ಯುನಿಕೇಶನ್ ಟೂಲ್ಸ್: ದಟ್ಟ ಅರಣ್ಯದಲ್ಲಿ ಚಾರಣಿಗರು ಹಾದಿ ತಪ್ಪುವುದನ್ನು ತಡೆಯಲು ಜಿಪಿಎಸ್ (GPS) ಆಧಾರಿತ ಉಪಕರಣಗಳು ಹಾಗೂ ಸುಧಾರಿತ ಸಂಪರ್ಕ ಸಾಧನಗಳನ್ನು ಬಳಸಲಾಗುತ್ತದೆ.
  • ವನ್ಯಜೀವಿಗಳ ಸಂಚಾರ ಪ್ರದೇಶಗಳಲ್ಲಿ ತಾತ್ಕಾಲಿಕ ನಿಷೇಧ: ಆನೆ, ಹುಲಿ, ಚಿರತೆ ಅಥವಾ ಕರಡಿಗಳಂತಹ ವನ್ಯಜೀವಿಗಳ ಸಂಚಾರ ಹೆಚ್ಚಾಗಿ ಕಂಡುಬಂದರೆ ಅಂತಹ ಮಾರ್ಗಗಳಲ್ಲಿ ಟ್ರೆಕ್ಕಿಂಗ್ ಅನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗುವುದು.
  • ತುರ್ತು ರಕ್ಷಣಾ ಪಡೆ : ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು, ಎಸ್‌ಡಿಆರ್‌ಎಫ್ (SDRF) ತಂಡಗಳು ಮತ್ತು ಸ್ಥಳೀಯರನ್ನು ಒಳಗೊಂಡ ಜಂಟಿ ರಕ್ಷಣಾ ಕಾರ್ಯವಿಧಾನವನ್ನು ಸಿದ್ಧಪಡಿಸಲಾಗಿದ್ದು, ಡ್ರೋನ್ (Drone) ಮೂಲಕವೂ ಕಣ್ಗಾವಲು ಇರಿಸಲಾಗುತ್ತದೆ.
  • ಕಾನೂನು ಕ್ರಮ ಹಾಗೂ ಬ್ಲ್ಯಾಕ್‌ಲಿಸ್ಟ್ : ಅರಣ್ಯ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿ, ನಿಗದಿಪಡಿಸಿದ ಹಾದಿ ಬಿಟ್ಟು ಬೇರೆಡೆಗೆ ತೆರಳುವ ಚಾರಣಿಗರು ಹಾಗೂ ಗೈಡ್‌ಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ, ಅವರನ್ನು ಕಪ್ಪುಪಟ್ಟಿಗೆ (Blacklist) ಸೇರಿಸಲಾಗುತ್ತದೆ.

ಅರಣ್ಯ ಪ್ರದೇಶಗಳು ಸಾಮಾನ್ಯ ಪ್ರವಾಸಿ ರಸ್ತೆಗಳಂತಲ್ಲ ಎಂದು ಸ್ಪಷ್ಟಪಡಿಸಿರುವ ಇಲಾಖೆ, ಅಗತ್ಯ ಮೂಲಸೌಕರ್ಯ ಹಾಗೂ ಸುರಕ್ಷತಾ ಸಿದ್ಧತೆಗಳನ್ನು ಪೂರ್ಣಗೊಳಿಸಿದ ನಂತರವಷ್ಟೇ ಮಾರ್ಗಗಳನ್ನು ಹಂತ-ಹಂತವಾಗಿ ಸಾರ್ವಜನಿಕರಿಗೆ ಮುಕ್ತಗೊಳಿಸಲಿದೆ. ಇತ್ತೀಚೆಗೆ ಕುದುರೆಮುಖ ವನ್ಯಜೀವಿ ವಿಭಾಗದ ಕೆಲವು ಮಾರ್ಗಗಳನ್ನು ಈ ನೂತನ ಸಿದ್ಧತೆಗಳೊಂದಿಗೆ ಮರುಆರಂಭಿಸಲಾಗಿದೆ.

ರಾಜ್ಯ