ಸವಣೂರು: ವಿಶೇಷಚೇತನರಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸುವ ಮತ್ತು ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಸವಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಮಾರಧಾರ ಸಭಾಭವನದಲ್ಲಿ 2025–26ನೇ ಸಾಲಿನ ವಿಶೇಷಚೇತನರ ಸಮನ್ವಯ ಗ್ರಾಮಸಭೆಯು ಶುಕ್ರವಾರ (ಜ. 23) ಅತ್ಯಂತ ಯಶಸ್ವಿಯಾಗಿ ನಡೆಯಿತು.

ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಂದರಿ ಬಿ.ಎಸ್. ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು. ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಜಯಶ್ರೀ, ಲೆಕ್ಕ ಸಹಾಯಕಿ ಶ್ರೀಮತಿ ಜಯಂತಿ ಕೆ. ಹಾಗೂ ಪೆರಾಬೆ ಗ್ರಾಮ ಪಂಚಾಯತ್ನ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಶ್ರೀ ಮುತ್ತಪ್ಪ ಅವರು ಸಂಪನ್ಮೂಲ ವ್ಯಕ್ತಿಯಾಗಿ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿ ಮುತ್ತಪ್ಪ ಅವರು ಮಾತನಾಡಿ, “ವಿಶೇಷಚೇತನರಿಗಾಗಿ ವಿಕಲಚೇತನರ ಕಲ್ಯಾಣ ಇಲಾಖೆಯಡಿ ಲಭ್ಯವಿರುವ ವಿವಿಧ ಮಾಸಾಶನಗಳು, ಸಾಧನ-ಸಲಕರಣೆಗಳು, ಶೈಕ್ಷಣಿಕ ನೆರವು ಹಾಗೂ ಉದ್ಯೋಗಾವಕಾಶಗಳ ಕುರಿತು ಸವಿಸ್ತಾರವಾಗಿ ವಿವರಿಸಿದರು. ಅರ್ಹ ಫಲಾನುಭವಿಗಳು ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು,” ಎಂದು ಕರೆ ನೀಡಿದರು.
ಸವಣೂರು ಪಂಚಾಯತ್ನ ಪುನರ್ವಸತಿ ಕಾರ್ಯಕರ್ತೆ ಶ್ರೀಮತಿ ದೀಪಿಕಾ ಅವರು ಕಳೆದ ಸಾಲಿನ ಹಾಗೂ ಈ ವರ್ಷದ ವಿಶೇಷಚೇತನರ ಕಲ್ಯಾಣ ಕಾರ್ಯಕ್ರಮಗಳ ವರದಿಯನ್ನು ಸಭೆಯ ಮುಂದೆ ವಾಚಿಸಿದರು. ಲೆಕ್ಕ ಸಹಾಯಕಿ ಶ್ರೀಮತಿ ಜಯಂತಿ ಅವರು ಅತಿಥಿಗಳನ್ನು ಸ್ವಾಗತಿಸಿ, ಕೊನೆಯಲ್ಲಿ ವಂದನಾರ್ಪಣೆ ಮಾಡಿದರು.
ಸಭೆಯಲ್ಲಿ ಗ್ರಾಮದ ವಿಶೇಷಚೇತನರು, ಅವರ ಪೋಷಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪಂಚಾಯತ್ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಕಾರ್ಯಕ್ರಮದ ಯಶಸ್ಸಿಗೆ ಪಂಚಾಯತ್ನ ಸರ್ವ ಸದಸ್ಯರು ಮತ್ತು ಸಿಬ್ಬಂದಿಗಳು ಸಂಪೂರ್ಣ ಸಹಕಾರ ನೀಡಿದರು.

