ಕಿರುತೆರೆ ನಟಿ ನಂದಿನಿ ಆತ್ಮಹತ್ಯೆ: ಡೆತ್‌ನೋಟ್‌ನಲ್ಲಿ ಅಸಲಿ ಕಾರಣ ಬಯಲು

ಕಿರುತೆರೆ ನಟಿ ನಂದಿನಿ ಆತ್ಮಹತ್ಯೆ: ಡೆತ್‌ನೋಟ್‌ನಲ್ಲಿ ಅಸಲಿ ಕಾರಣ ಬಯಲು

ಬೆಂಗಳೂರು: ರಾಜಧಾನಿಯ ಕೆಂಗೇರಿ ಉಪನಗರದ ಪಿಜಿಯೊಂದರಲ್ಲಿ ಕನ್ನಡ ಕಿರುತೆರೆಯ ಉದಯೋನ್ಮುಖ ನಟಿ ನಂದಿನಿ ಸಿ.ಎಂ. (26) ಆತ್ಮಹತ್ಯೆಗೆ ಶರಣಾಗಿದ್ದಾರೆ. ವೈಯಕ್ತಿಕ ಸಮಸ್ಯೆ ಹಾಗೂ ವೃತ್ತಿಜೀವನದ ಒತ್ತಡದಿಂದಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿದುಬಂದಿದೆ.

ಘಟನೆಯ ಹಿನ್ನೆಲೆ:​ ವಿಜಯನಗರ ಜಿಲ್ಲೆಯ ಕೊಟ್ಟೂರಿನ ಮೂಲದವರಾದ ನಂದಿನಿ, ಕಳೆದ 2019 ರಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು. ಇಂಜಿನಿಯರಿಂಗ್ ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟು ನಟನೆಯಲ್ಲಿ ಆಸಕ್ತಿ ಹೊಂದಿದ್ದ ಅವರು, ಕೆಲವು ಕನ್ನಡ ಧಾರಾವಾಹಿಗಳಲ್ಲಿ ನಟಿಸಿದ್ದರು. ಡಿಸೆಂಬರ್ 28ರ ರಾತ್ರಿ ಸ್ನೇಹಿತರ ಮನೆಗೆ ಹೋಗಿ ಮರಳಿದ್ದ ನಂದಿನಿ, ತಡರಾತ್ರಿ ಕೆಂಗೇರಿಯ ಪಿಜಿಯಲ್ಲಿ ನೇಣಿಗೆ ಶರಣಾಗಿದ್ದಾರೆ.

ಡೆತ್‌ನೋಟ್‌ನಲ್ಲಿ ಏನಿದೆ? ​ಸ್ಥಳಕ್ಕೆ ಧಾವಿಸಿದ ಕೆಂಗೇರಿ ಪೊಲೀಸರು ಪರಿಶೀಲನೆ ನಡೆಸಿದಾಗ ಡೈರಿಯೊಂದರಲ್ಲಿ ಬರೆದಿದ್ದ ಡೆತ್‌ನೋಟ್ ಪತ್ತೆಯಾಗಿದೆ. “ನನಗೆ ನಟನೆಯಲ್ಲಿ ಆಸಕ್ತಿ ಇತ್ತು, ಆದರೆ ತಂದೆಯ ನಿಧನದ ನಂತರ ಅನುಕಂಪದ ಆಧಾರದ ಮೇಲೆ ಸಿಕ್ಕ ಸರ್ಕಾರಿ ಕೆಲಸ ಮಾಡಲು ಇಷ್ಟವಿರಲಿಲ್ಲ. ಕುಟುಂಬದವರು ನನ್ನ ನಿರ್ಧಾರಕ್ಕೆ ಬೆಂಬಲ ನೀಡುತ್ತಿಲ್ಲ” ಎಂದು ನಂದಿನಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ನಂದಿನಿ ಅವರ ತಾಯಿ ಬಸವರಾಜೇಶ್ವರಿ ಅವರು ನೀಡಿದ ದೂರಿನ ಮೇರೆಗೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗಳ ಸಾವಿನಲ್ಲಿ ಯಾರ ಮೇಲೂ ಸಂಶಯವಿಲ್ಲ ಎಂದು ಅವರು ಹೇಳಿಕೆ ನೀಡಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

ಅಪರಾಧ ರಾಜ್ಯ