ಕರ್ನಾಟಕದ ಭಕ್ತರೊಬ್ಬರಿಂದ ಅಯೋಧ್ಯೆ ರಾಮಮಂದಿರಕ್ಕೆ 25-30 ಕೋಟಿ ಮೌಲ್ಯದ ಭವ್ಯ ರಾಮನ ವಿಗ್ರಹ ದಾನ!

ಕರ್ನಾಟಕದ ಭಕ್ತರೊಬ್ಬರಿಂದ ಅಯೋಧ್ಯೆ ರಾಮಮಂದಿರಕ್ಕೆ 25-30 ಕೋಟಿ ಮೌಲ್ಯದ ಭವ್ಯ ರಾಮನ ವಿಗ್ರಹ ದಾನ!

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ರಾಮ ಜನ್ಮಭೂಮಿ ಮಂದಿರಕ್ಕೆ ಕರ್ನಾಟಕದ ಭಕ್ತರೊಬ್ಬರು ಸುಮಾರು 25 ರಿಂದ 30 ಕೋಟಿ ರೂಪಾಯಿ ಮೌಲ್ಯದ ಭವ್ಯ ರಾಮನ ವಿಗ್ರಹವನ್ನು ಕಾಣಿಕೆಯಾಗಿ ನೀಡಿದ್ದಾರೆ. ರತ್ನಖಚಿತವಾದ ಈ ವಿಗ್ರಹವು ಈಗ ಇಡೀ ದೇಶದ ಗಮನ ಸೆಳೆದಿದೆ.

10 ಅಡಿ ಎತ್ತರದ ರತ್ನಖಚಿತ ವಿಗ್ರಹ ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ, ಈ ವಿಗ್ರಹವು ಸುಮಾರು 10 ಅಡಿ ಎತ್ತರ ಮತ್ತು 8 ಅಡಿ ಅಗಲವಿದೆ. ದಕ್ಷಿಣ ಭಾರತದ ಅದ್ಭುತ ಶಿಲ್ಪಕಲೆಗೆ ಸಾಕ್ಷಿಯಾಗಿರುವ ಈ ವಿಗ್ರಹವನ್ನು ಚಿನ್ನದ ಲೇಪನ ಹಾಗೂ ವಜ್ರ, ವೈಢೂರ್ಯ, ಪಚ್ಚೆ ಮತ್ತು ನೀಲಮಣಿಗಳಂತಹ ಅಮೂಲ್ಯ ರತ್ನಗಳಿಂದ ಅಲಂಕರಿಸಲಾಗಿದೆ. ಮಂಗಳವಾರ ಸಂಜೆ ಬಿಗಿ ಭದ್ರತೆಯ ನಡುವೆ ವಿಮಾನದ ಮೂಲಕ ಈ ವಿಗ್ರಹವನ್ನು ಅಯೋಧ್ಯೆಗೆ ತರಲಾಗಿದೆ.

ಅನಾಮಧೇಯವಾಗಿ ಉಳಿದ ದಾನಿ​: ಈ ಬೃಹತ್ ದೇಣಿಗೆ ನೀಡಿದ ಭಕ್ತರು ತಮ್ಮ ಹೆಸರನ್ನು ಬಹಿರಂಗಪಡಿಸಲು ಇಚ್ಛಿಸದೆ ಅನಾಮಧೇಯರಾಗಿ ಉಳಿದಿದ್ದಾರೆ. ಕರ್ನಾಟಕ ಮತ್ತು ಅಯೋಧ್ಯೆಯ ನಡುವಿನ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಸಂಬಂಧವನ್ನು ಈ ನಡೆ ಮತ್ತಷ್ಟು ಗಟ್ಟಿಗೊಳಿಸಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿದ ‘ರಾಮಲಲ್ಲಾ’ ಮೂರ್ತಿ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಿದ್ದು, ಈಗ ಕರ್ನಾಟಕದ ಮತ್ತೊಂದು ಕೊಡುಗೆ ಮಂದಿರದ ಮೆರುಗು ಹೆಚ್ಚಿಸಲಿದೆ.

​ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯರು ವಿಗ್ರಹದ ಆಗಮನವನ್ನು ಖಚಿತಪಡಿಸಿದ್ದಾರೆ. ಸದ್ಯ ವಿಗ್ರಹದ ತಾಂತ್ರಿಕ ವಿವರಗಳು, ಲೋಹದ ತೂಕ ಮತ್ತು ಮೌಲ್ಯದ ಬಗ್ಗೆ ಅಧಿಕೃತ ಪರಿಶೀಲನೆ ನಡೆಯುತ್ತಿದೆ. ಈ ಪ್ರಕ್ರಿಯೆ ಮುಗಿದ ನಂತರ ವಿಗ್ರಹವನ್ನು ಮಂದಿರದ ಆವರಣದಲ್ಲಿ ಎಲ್ಲಿ ಪ್ರತಿಷ್ಠಾಪಿಸಬೇಕು ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಟ್ರಸ್ಟ್ ತಿಳಿಸಿದೆ.

ಆಧ್ಯಾತ್ಮ ರಾಜ್ಯ ರಾಷ್ಟ್ರೀಯ