ಆಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಪಾಕಿಸ್ತಾನ ಸೈನ್ಯದ ಮೇಲೆ ನಡೆದ ಮಾರಕ ದಾಳಿಗೆ ಹೊಣೆ ಹೊತ್ತಿದೆ. ಈ ದಾಳಿಯಲ್ಲಿ ಕನಿಷ್ಠ 58 ಪಾಕಿಸ್ತಾನ ಸೈನಿಕರು ಮೃತಪಟ್ಟಿದ್ದು, ಸುಮಾರು 30 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ತಾಲಿಬಾನ್ ವಕ್ತಾರ ಜಬೀಹುಲ್ಲಾ ಮುಜಾಹಿದ್ ಹೇಳುವಂತೆ, ಈ ದಾಳಿ ಪಾಕಿಸ್ತಾನ ವಾಯುಪಡೆಯಿಂದ ಪಕ್ತಿಕಾ ಪ್ರಾಂತ್ಯದ ನಾಗರಿಕ ಮಾರುಕಟ್ಟೆಯ ಮೇಲೆ ನಡೆದ ಅತಿ ಕೃತ್ಯಕ್ಕೆ ಪ್ರತೀಕಾರವಾಗಿ ನಡೆಸಲಾಗಿದೆ.

ತಾಲಿಬಾನ್ ಪ್ರಕಟಿಸಿದ ಮಾಹಿತಿಯ ಪ್ರಕಾರ, ದಾಳಿಯ ವೇಳೆ 9 ತಾಲಿಬಾನ್ ಯೋಧರು ಸಾವನ್ನಪ್ಪಿ, 18 ಮಂದಿ ಗಾಯಗೊಂಡಿದ್ದಾರೆ. ಗಡಿ ಪ್ರದೇಶದ ಅನೇಕ ಸ್ಥಳಗಳನ್ನು ತಾಲಿಬಾನ್ ಟಾರ್ಗೆಟ್ ಮಾಡಿದಂತೆ ಹೇಳಲಾಗಿದೆ.
ಇತ್ತೀಚಿನ ದಿನಗಳಲ್ಲಿ ಕಾಬೂಲ್‌ನಲ್ಲಿ ನಡೆದ ಸ್ಫೋಟಗಳು ಮತ್ತು ಪಾಕಿಸ್ತಾನದ ಅಫ್ಘಾನ್ ಪ್ರದೇಶದೊಳಗಿನ ಆರೋಪಿತ ಬಾಂಬ್ ದಾಳಿಯ ನಂತರ ಎರಡೂ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಗರಿಷ್ಠ ಮಟ್ಟಕ್ಕೆ ಏರಿದೆ. ಪಾಕಿಸ್ತಾನವು ಆಫ್ಘಾನ್ ಸರ್ಕಾರದ ಮೇಲೆ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (TTP) ಉಗ್ರರನ್ನು ಆಶ್ರಯ ನೀಡುತ್ತಿರುವ ಆರೋಪ ಮಾಡಿದೆ, ಆದರೆ ತಾಲಿಬಾನ್ ಈ ಆರೋಪವನ್ನು ತಳ್ಳಿ ಹಾಕಿದೆ.
ಈ ಹಿನ್ನಲೆಯಲ್ಲಿ ಕುನರ್-ಕುರಂ ಪ್ರದೇಶದಲ್ಲಿ ಎರಡು ರಾಷ್ಟ್ರಗಳ ಸೈನ್ಯಗಳು ಶಸ್ತ್ರಾಸ್ತ್ರಗಳಿಂದ ಪರಸ್ಪರ ದಾಳಿ ನಡೆಸಿದವು. ಪ್ರಮುಖ ಗಡಿ ಮಾರ್ಗಗಳಾದ ತೋರ್ಕಮ್ ಮತ್ತು ಚಮನ್ ಬಾರ್ಡರ್ ಪಾಯಿಂಟ್‌ಗಳನ್ನು ಮುಚ್ಚಲಾಗಿದ್ದು, ನೂರಾರು ಸರಕು ಟ್ರಕ್‌ಗಳು ಸಿಲುಕಿಕೊಂಡಿವೆ.
ಪ್ರಾದೇಶಿಕ ಶಾಂತಿ ಕಾಪಾಡಲು ಸೌದಿ ಅರೇಬಿಯಾ ಮತ್ತು ಕತಾರ್ ಸೇರಿದಂತೆ ಅನೇಕ ದೇಶಗಳು ಮಧ್ಯಪ್ರವೇಶಿಸಿ, ಎರಡು ರಾಷ್ಟ್ರಗಳು ಸಹಿಷ್ಣುತೆಯನ್ನು ತೋರಿಸಿ ಸಂವಾದದ ಮೂಲಕ ವಿವಾದ ಬಗೆಹರಿಸಿಕೊಳ್ಳುವಂತೆ ಕರೆ ನೀಡಿವೆ.

