ಮಧ್ಯಪ್ರದೇಶದಲ್ಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ ಪಲ್ಟಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ಉತ್ತರ ಪ್ರದೇಶದ ಅಕ್ಬರ್‌ಪುರದ 28 ವರ್ಷದ ಗಾಯತ್ರಿ ಬಾಯಿ ಸಾವನ್ನಪ್ಪಿದ್ದು, 24 ಮಂದಿ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಪೊಲೀಸರ ಪ್ರಕಾರ, ಬೆಳಗ್ಗೆ 4 ಗಂಟೆಯ ಸುಮಾರಿಗೆ ಆಗ್ರಾ–ಮುಂಬೈ ರಾಷ್ಟ್ರೀಯ ಹೆದ್ದಾರಿಯ ಅಭಯಪುರ ಗ್ರಾಮದ ಬಳಿ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಗುಜರಾತ್‌ನ ಜಾಮ್‌ನಗರದಿಂದ ಹೊರಟಿದ್ದ ಬಸ್‌ನಲ್ಲಿ ಹೆಚ್ಚಿನವರು ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಮೂಲದ ಕಾರ್ಮಿಕರಿದ್ದರು.
ಚಾಲಕ ಅತಿ ವೇಗದಲ್ಲಿ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ್ದರಿಂದ ಬಸ್ ರಸ್ತೆ ಬದಿಗೆ ಉರುಳಿದೆಯೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು, ಸಂಚಾರ ಇಲಾಖೆ ಹಾಗೂ ಆಂಬ್ಯುಲೆನ್ಸ್ ಸಿಬ್ಬಂದಿ ಧಾವಿಸಿ ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರು. ಗಂಭೀರವಾಗಿ ಗಾಯಗೊಂಡ ಕೆಲವರನ್ನು ಉತ್ತಮ ಚಿಕಿತ್ಸೆಗೆ ಇತರ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಅಪಘಾತಕ್ಕೆ ಕಾರಣರಾದ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿಯುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಘನಶ್ಯಾಮ್ ಮಾಲ್ವಿಯಾ ತಿಳಿಸಿದ್ದಾರೆ. ಸ್ಥಳೀಯರು ಸಹ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

