ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು (ಸೆ. 21, ಭಾನುವಾರ) ಸಂಜೆ 5 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ. ನಾಳೆಯಿಂದಲೇ ಜಾರಿಗೆ ಬರುವ ಸರಕು ಮತ್ತು ಸೇವಾ ತೆರಿಗೆ (GST) ಸುಧಾರಣೆಗಳ ಹಿನ್ನೆಲೆಯಲ್ಲಿ ಈ ಭಾಷಣ ಮಹತ್ವ ಪಡೆದುಕೊಂಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಅವರ ಭಾಷಣದ ಕುರಿತ ಅನೇಕ ನಿರೀಕ್ಷೆಗಳು ವ್ಯಕ್ತವಾಗಿದೆ. ಕೆಲವರು ಇದು ಮುಖ್ಯವಾಗಿ GST ಜಾರಿಗೆ ಸಂಬಂಧಿಸಿದ ಸಂದೇಶವೇ ಆಗಿರಬಹುದು ಎಂದು ಅಭಿಪ್ರಾಯಪಟ್ಟರೆ, ಇನ್ನೂ ಕೆಲವರು ಅಮೆರಿಕಾದ H-1B ವೀಸಾ, ರಕ್ಷಣಾ ವಿಚಾರಗಳು ಹಾಗೂ ಸ್ವದೇಶಿ ಉತ್ಪನ್ನಗಳ ಪ್ರೋತ್ಸಾಹದ ಬಗ್ಗೆ ಪ್ರಸ್ತಾಪವಾಗಬಹುದು ಎಂದು ಅಂದಾಜು ವ್ಯಕ್ತಪಡಿಸಿದ್ದಾರೆ.
ಹಿಂದಿನ ಬಾರಿ ಮೋದಿ ಅವರು ಮೇ ತಿಂಗಳಲ್ಲಿ ಪಹಲ್ಗಾಮ್ ಉಗ್ರಹಲ್ಲೆಯಲ್ಲಿ 26 ಜನರು ಬಲಿಯಾದ ಬಳಿಕ, ಭಾರತ–ಪಾಕಿಸ್ತಾನ ಗಡಿತಣಾವಗಳ ನಂತರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದರು. ಆ ಸಂದರ್ಭದಲ್ಲಿ ಭಾರತ “ಆಪರೇಶನ್ ಸಿಂದೂರ” ನಡೆಸಿತ್ತು.
ಇದೀಗ ಜಾರಿಗೆ ಬರುವ GST 2.0 ಅಡಿಯಲ್ಲಿ ಹಲವು ವಸ್ತುಗಳ ಮೇಲೆ ತೆರಿಗೆ ದರ ಕಡಿತಗೊಂಡಿದ್ದು, ನವರಾತ್ರಿಯ ಮೊದಲ ದಿನದಿಂದಲೇ ಅಡುಗೆ ಮನೆಯ ಅವಶ್ಯಕ ವಸ್ತುಗಳಾದ ಪನೀರ್, ತುಪ್ಪ, ಕಾಫಿ, ಕ್ಯಚಪ್ ಸೇರಿದಂತೆ ಔಷಧಿಗಳು ಹಾಗೂ ಎಲೆಕ್ಟ್ರಾನಿಕ್ ಸಾಧನಗಳು ಸಸ್ತೆಯಾಗಲಿವೆ. ಧನತೇರಸ್ ಸಂದರ್ಭದಲ್ಲಿ ವಾಹನ ಖರೀದಿದಾರರು ವಿಶೇಷ ಲಾಭ ಪಡೆಯಲಿದ್ದಾರೆ, ಏಕೆಂದರೆ ವಾಹನಗಳ ಮೇಲಿನ ತೆರಿಗೆ ದರ ಕಡಿಮೆಯಾಗಿದ್ದು, ಪ್ರಮುಖ ವಾಹನ ಕಂಪನಿಗಳು ಈಗಾಗಲೇ ಬೆಲೆ ಇಳಿಕೆಯನ್ನು ಘೋಷಿಸಿವೆ.
ಇಂದು ಮೋದಿ ಯಾವ ವಿಷಯದ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂದು ಕಾದು ನೋಡಬೇಕಿದೆ.

