ಹೆಚ್ಚುತ್ತಿರುವ ಬೀದಿ ನಾಯಿಗಳ ದಾಳಿಗಳ ಹಿನ್ನೆಲೆ ಉತ್ತರಪ್ರದೇಶ ಸರ್ಕಾರವು ಹೊಸ ನಿಯಮಾವಳಿಗಳನ್ನು ಜಾರಿಗೊಳಿಸಿದೆ. ಸರ್ಕಾರದ ಹೊಸ ಮಾರ್ಗಸೂಚಿಗಳ ಪ್ರಕಾರ, ಮಾನವರ ಮೇಲೆ ಕಾರಣವಿಲ್ಲದೆ ದಾಳಿ ಮಾಡುವ ನಾಯಿಗಳನ್ನು 10 ದಿನಗಳ ಕಾಲ ಪ್ರಾಣಿ ಆಶ್ರಯ ಕೇಂದ್ರದಲ್ಲಿ ವೀಕ್ಷಣೆಯಲ್ಲಿಡಲಾಗುವುದು. ನಂತರ ಅವುಗಳನ್ನು ಶಸ್ತ್ರಚಿಕಿತ್ಸೆ, ಮೈಕ್ರೋಚಿಪ್ ಅಳವಡಿಕೆ ನಡೆಸಿ, ತಮ್ಮದೇ ಪ್ರದೇಶಕ್ಕೆ ಬಿಟ್ಟುಕೊಡಲಾಗುತ್ತದೆ.

ಪುನಃ ದಾಳಿ ನಡೆಸಿದ ನಾಯಿಗಳನ್ನು ಜೀವಮಾನ ಪೂರ್ತಿ ಪ್ರಾಣಿ ಆಶ್ರಯ ಕೇಂದ್ರದಲ್ಲೇ ಇರಿಸಲಾಗುವುದು. ಆದರೆ ಯಾರಾದರೂ ಅವುಗಳನ್ನು ದತ್ತು ತೆಗೆದುಕೊಂಡರೆ, ಜೀವಮಾನಪೂರ್ತಿ ನೋಡಿಕೊಳ್ಳುವುದಾಗಿ ನೊಂದಾಯಿತ ಅಫಿಡವಿಟ್ ಸಲ್ಲಿಸಬೇಕಾಗುತ್ತದೆ.
ಈ ಸಂಬಂಧ ತ್ರಿಸದಸ್ಯ ಸಮಿತಿಯೊಂದನ್ನು ರಚಿಸಲಾಗಿದ್ದು, ಇದರಲ್ಲಿ ಪಶುವೈದ್ಯರು, ಪ್ರಾಣಿಗಳ ವರ್ತನೆ ತಜ್ಞರು ಮತ್ತು ಮಹಾನಗರ ಪಾಲಿಕೆಯ ಪ್ರತಿನಿಧಿಗಳು ಸೇರಿದ್ದಾರೆ. ಅವರು ನಾಯಿ ದಾಳಿ ಪ್ರಚೋದಿತವಾಗಿತ್ತೇ ಎಂಬುದನ್ನು ಪರಿಶೀಲಿಸಲಿದ್ದಾರೆ. ಒತ್ತಡದಿಂದ ಹುಟ್ಟುವ ಆಕ್ರಮಣಶೀಲತೆಗೆ ಸಂಬಂಧಿಸಿದ ನಾಯಿಗಳಿಗೆ ವಿಶೇಷ ತರಬೇತಿ ನೀಡಲಾಗುವುದು.
ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಜಾರಿಯಾದ ಈ ಕ್ರಮವು ಸಾರ್ವಜನಿಕರ ಸುರಕ್ಷತೆ ಮತ್ತು ಪ್ರಾಣಿಗಳ ಕಲ್ಯಾಣದ ನಡುವೆ ಸಮತೋಲನ ಸಾಧಿಸುವ ಉದ್ದೇಶ ಹೊಂದಿದೆ. ಇದರ ಯಶಸ್ಸು ಕಟ್ಟುನಿಟ್ಟಾದ ಜಾರಿ, ಸ್ಥಳೀಯ ಸಂಸ್ಥೆಗಳ ಸಹಕಾರ ಮತ್ತು ಜನಸಾಮಾನ್ಯರ ಪಾಲ್ಗೊಳ್ಳಿಕೆಯಿಂದ ಸಾಧ್ಯವಾಗಲಿದೆ.

