ಮಲಯಾಳಂ ನಟಿ ಹಾಗೂ ಕನ್ನಡದ ‘ಗಜ’ ಚಿತ್ರದ ಹೀರೋಯಿನ್ ನವ್ಯಾ ನಾಯರ್ ಅವರು ಆಸ್ಟ್ರೇಲಿಯಾದಲ್ಲಿ ಅಪರೂಪದ ಘಟನೆಗೆ ಗುರಿಯಾಗಿದ್ದಾರೆ. ಬರೀ ಮಲ್ಲಿಗೆ ಹೂವು ಮುಡಿದಿದ್ದಕ್ಕಾಗಿ ಅವರು ರೂ.1.14 ಲಕ್ಷ (AUD 1,980) ದಂಡ ಪಾವತಿಸಬೇಕಾದ ಸ್ಥಿತಿ ಎದುರಾಗಿದೆ. ಆಸ್ಟ್ರೇಲಿಯಾದ ಮೆಲ್ಬೋರ್ನ್ ನಗರದಲ್ಲಿ ನಡೆದ ಮಲಯಾಳಿ ಅಸೋಸಿಯೇಷನ್ ಆಫ್ ವಿಕ್ಟೋರಿಯಾ ಆಯೋಜಿಸಿದ್ದ ಓಣಂ ಆಚರಣೆಯಲ್ಲಿ ಭಾಗವಹಿಸಲು ಅವರು ಪ್ರವಾಸ ಕೈಗೊಂಡಿದ್ದರು.

ಆದರೆ ಮೆಲ್ಬೋರ್ನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನವ್ಯಾ ನಾಯರ್ ಅವರನ್ನು ತಡೆದು ಪರಿಶೀಲಿಸಿದ ಅಧಿಕಾರಿಗಳು, ಅವರ ಮುಡಿಯಲ್ಲಿ ಇದ್ದ 15 ಸೆಂ.ಮೀ ಉದ್ದದ ಮಲ್ಲಿಗೆ ಹೂವು ಕಾರಣಕ್ಕಾಗಿ ಜೈವಿಕ ಭದ್ರತಾ ಕಾನೂನು ಉಲ್ಲಂಘನೆ ಮಾಡಿರುವುದಾಗಿ ಹೇಳಿ ದಂಡ ವಿಧಿಸಿದರು. ಆಸ್ಟ್ರೇಲಿಯಾದಲ್ಲಿ ಹೂವು, ಹಣ್ಣು, ತರಕಾರಿಗಳು ಅಥವಾ ಸಸ್ಯ ಉತ್ಪನ್ನಗಳನ್ನು ತರಲು ಕಟ್ಟುನಿಟ್ಟಿನ ನಿಷೇಧವಿದ್ದು, ಇವುಗಳಲ್ಲಿ ಕೀಟಗಳು ಅಥವಾ ರೋಗಾಣುಗಳು ಪರಿಸರಕ್ಕೆ ಅಪಾಯ ಉಂಟುಮಾಡಬಹುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ನವ್ಯಾ ನಾಯರ್, “ನನ್ನ ತಂದೆ ಕೊಚ್ಚಿಯಲ್ಲಿ ಮಲ್ಲಿಗೆಯನ್ನು ಕೊಟ್ಟಿದ್ದರು. ಒಂದನ್ನು ಕೂದಲಿಗೆ ಹಾಕಿಕೊಂಡೆ, ಮತ್ತೊಂದನ್ನು ಕ್ಯಾರಿ ಬ್ಯಾಗ್‌ನಲ್ಲಿ ಇಟ್ಟಿದ್ದೆ. ನಾನು ತಿಳಿಯದೆ ಕಾನೂನು ಉಲ್ಲಂಘನೆ ಮಾಡಿದ್ದೇನೆ. ತಪ್ಪು ಒಂದು ತಪ್ಪೇ, ಅದಕ್ಕಾಗಿ ದಂಡವನ್ನು 28 ದಿನಗಳಲ್ಲಿ ಪಾವತಿಸಬೇಕಾಗಿದೆ” ಎಂದು ತಿಳಿಸಿದ್ದಾರೆ.
ಈ ಘಟನೆ ಬಳಿಕ ನವ್ಯಾ ನಾಯರ್, ವಿದೇಶ ಪ್ರಯಾಣಿಕರು ಸ್ಥಳೀಯ ಕಾನೂನುಗಳನ್ನು ತಿಳಿದು ಪಾಲಿಸಬೇಕೆಂದು ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ.

