ಧರ್ಮಸ್ಥಳ ತೆಲೆಬುರುಡೆ ಪ್ರಕರಣ: 8 ಗಂಟೆಗಳ ಎಸ್‌ಐಟಿ ವಿಚಾರಣೆ, ಮುಸುಕುಧಾರಿ ವ್ಯಕ್ತಿ ಅಜ್ಞಾತ ಸ್ಥಳಕ್ಕೆ

ಧರ್ಮಸ್ಥಳ ತೆಲೆಬುರುಡೆ ಪ್ರಕರಣ: 8 ಗಂಟೆಗಳ ಎಸ್‌ಐಟಿ ವಿಚಾರಣೆ, ಮುಸುಕುಧಾರಿ ವ್ಯಕ್ತಿ ಅಜ್ಞಾತ ಸ್ಥಳಕ್ಕೆ

ಧರ್ಮಸ್ಥಳದಲ್ಲಿ ನಡೆದಿದೆ ಎಂದು ಆರೋಪಿಸಲಾಗಿರುವ ನೂರಾರು ಶವಗಳ ಹೂತಿಟ್ಟ ಪ್ರಕರಣ ಹಾಗೂ ಇತರ ಸಂಬಂಧಿತ ಘಟನೆಗಳು ಇತ್ತೀಚೆಗೆ ಭಾರಿ ಕೋಲಾಹಲವನ್ನು ಉಂಟುಮಾಡಿವೆ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳದ ಮಾಜಿ ನೌಕರನಾಗಿದ್ದ ಎನ್ನುವ ಮುಸುಕುಧಾರಿ ವ್ಯಕ್ತಿಯೊಬ್ಬನು “ನಾನು ಶವಗಳನ್ನು ಹೂತಿದ್ದೆ” ಎಂಬ ಸ್ಫೋಟಕ ಆರೋಪ ಹೊರಿಸಿದ್ದರಿಂದ, ತನಿಖೆಗೆ ಎಸ್ಐಟಿ ತಂಡ ರಚನೆಯಾಗಿದೆ. ಇದೀಗ ಈ ತಂಡದ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದು, ಆ ವ್ಯಕ್ತಿಯನ್ನು ಮಂಗಳೂರಿನ ಮಲ್ಲಿಕಟ್ಟೆಯ ಎಸ್ಐಟಿ ಕಚೇರಿಗೆ ಕರೆಸಿಕೊಂಡು ಸತತ 8 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.

ವಿಚಾರಣೆ ಇಂದು ಬೆಳಿಗ್ಗೆ 11 ಗಂಟೆಗೆ ಆರಂಭಗೊಂಡು ಸಂಜೆ 7.20ರ ವರೆಗೆ ನಡಿದಿದ್ದು, ಸುಮಾರು 8 ಗಂಟೆಗಳ ಕಾಲ ಪ್ರಕ್ರಿಯೆ ನಡೆದಿದೆ. ವಿಚಾರಣೆಗೆ ಮುಸುಕುಧಾರಿ ವ್ಯಕ್ತಿ ಇಬ್ಬರು ವಕೀಲರ ಜೊತೆ ಆಗಮಿಸಿದ್ದರು. ವಿಚಾರಣೆ ಅಂತ್ಯವಾದ ನಂತರ, ಆತನು ತಮ್ಮ ವಕೀಲರ ಜೊತೆಗೆ ಅಜ್ಞಾತ ಸ್ಥಳಕ್ಕೆ ತೆರಳಿದ್ದಾನೆ.

ವಿಚಾರಣೆಯನ್ನು ಎಸ್ಐಟಿ ತಂಡದ ಡಿಐಜಿ ಎಂ.ಎನ್. ಅನುಚೇತ್ ಸೇರಿದಂತೆ ಹಿರಿಯ ಅಧಿಕಾರಿಗಳು ನಡೆಸಿದ್ದು, ಆ ವ್ಯಕ್ತಿಯಿಂದ ಸಾಕಷ್ಟು ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ. ಮುಂದೆ ಕೂಡ ಆತನನ್ನು ಮತ್ತೊಮ್ಮೆ ವಿಚಾರಣೆಗೆ ಕರೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸುತ್ತವೆ.

ವಿಚಾರಣೆ ವೇಳೆ ಮುಸುಕುಧಾರಿ ವ್ಯಕ್ತಿಗೆ ಎಸ್ಐಟಿ ಅಧಿಕಾರಿಗಳು ಹಲವು ಪ್ರಶ್ನೆಗಳು ಮಾಡಿದ್ದಾರೆ. “ಬುರುಡೆಗಳನ್ನು ನಿರ್ದಿಷ್ಟ ಪ್ರದೇಶದಿಂದಲೇ ಹೊರತೆಗೆಯಲು ಏಕೆ ನಿರ್ಧರಿಸಲಾಯಿತು?”, “ಅದೇ ಸ್ಥಳವೇನು ವಿಶೇಷ?”, “ಬುರುಡೆ ಹೊರತೆಗೆದ ಬಳಿಕ ಪೊಲೀಸ್‌ಗಳಿಗೆ ತಕ್ಷಣ ಮಾಹಿತಿ ನೀಡದಿದ್ದೇಕೆ?” ಎಂಬಂತಹ ಪ್ರಶ್ನೆಗಳೊಂದಿಗೆ ತನಿಖೆ ಮುಂದುವರೆದಿದೆ. ಈತನ ಹೇಳಿಕೆಗಳು ಈ ಪ್ರಕರಣದ ತನಿಖೆಗೆ ಮಹತ್ವಪೂರ್ಣ ದಿಕ್ಕನ್ನು ನೀಡಬಹುದು ಎಂಬ ನಿರೀಕ್ಷೆಯಿದೆ.

ಅಪರಾಧ ರಾಜ್ಯ ರಾಷ್ಟ್ರೀಯ