ಧರ್ಮಸ್ಥಳ ಕೇಸ್: ಮಾಧ್ಯಮದ ಧ್ವನಿ ಅಡಗಿಸಲು ಹೊರಡಿಸಿದ್ದ ಆದೇಶ ತೆರವು – ಈ ದಿನ ಯೂಟ್ಯೂಬ್ ಚಾನೆಲ್ ಬ್ಲಾಕ್ ತೆರವು ಮಾಡಿದ ಹೈಕೋರ್ಟ್

ಧರ್ಮಸ್ಥಳ ಕೇಸ್: ಮಾಧ್ಯಮದ ಧ್ವನಿ ಅಡಗಿಸಲು ಹೊರಡಿಸಿದ್ದ ಆದೇಶ ತೆರವು – ಈ ದಿನ ಯೂಟ್ಯೂಬ್ ಚಾನೆಲ್ ಬ್ಲಾಕ್ ತೆರವು ಮಾಡಿದ ಹೈಕೋರ್ಟ್

ಧರ್ಮಸ್ಥಳ ಮತ್ತು ಸೌಜನ್ಯ ಸಂಬಂಧಿತ ಸುದ್ದಿಗಳನ್ನು ಪ್ರಕಟಿಸದಂತೆ ಸಿವಿಲ್ ಕೋರ್ಟ್ ನೀಡಿದ್ದ ಆದೇಶವನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪದ ಮೇರೆಗೆ, ಧರ್ಮಸ್ಥಳ ದೇವಸ್ಥಾನ ಟ್ರಸ್ಟ್‌ನ ಕೆಲವರು ಈದಿನ ಡಾಟ್‌ ಕಾಮ್ ಯೂಟ್ಯೂಬ್‌ ಚಾನೆಲ್‌ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ನ ಏಕಸದಸ್ಯ ಪೀಠವು ಮಧ್ಯಂತರ ಆದೇಶ ನೀಡಿದ್ದು, ಆ ಆಧಾರದಲ್ಲಿ ಯೂಟ್ಯೂಬ್‌ ಚಾನೆಲ್‌ ಜುಲೈ 10ರಿಂದ ಬ್ಲಾಕ್ ಮಾಡಲಾಗಿತ್ತು.

ಈ ಮಧ್ಯಂತರ ಆದೇಶವನ್ನು ಪ್ರಶ್ನಿಸಿ, ಈದಿನ ತಂಡ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಜುಲೈ 23ರಂದು ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠವು ಈ ಅರ್ಜಿಯನ್ನು ವಿಚಾರಣೆ ನಡೆಸಿ, ಹಳೆಯ ಮಧ್ಯಂತರ ಆದೇಶವನ್ನು ತೆರವುಗೊಳಿಸಿ, ಯೂಟ್ಯೂಬ್‌ ಬ್ಲಾಕ್ ಕೂಡ ತೆರವುಗೊಳಿಸುವಂತೆ ನಿರ್ದೇಶನ ನೀಡಿದೆ.

ಈದಿನ ತಂಡದ ಪರವಾಗಿ ವಾದಿಸಿದ ಹಿರಿಯ ವಕೀಲ ಕ್ಲಿಫ್ಟನ್ ಡಿ ರೊಝಾರಿಯೋ ಅವರು, “ಭಾರತದ ಐಟಿ ಕಾಯ್ದೆಯಡಿ ಸರ್ಕಾರ ಮಾತ್ರವೇ ರಾಷ್ಟ್ರೀಯ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ ಅಥವಾ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವ ವಿಷಯಗಳನ್ನೇ ಬ್ಲಾಕ್ ಮಾಡಬಹುದು. ಆದರೆ ಈ ಪ್ರಕರಣದಲ್ಲಿ ಅಂತಹ ಕಾರಣಗಳಿಲ್ಲದಿದ್ದರೂ ಮಧ್ಯಂತರ ಆದೇಶದ ಆಧಾರದಲ್ಲಿ ಯೂಟ್ಯೂಬ್‌ ಬ್ಲಾಕ್ ಮಾಡಲಾಗಿದೆ. ಈದಿನ ಮಾಧ್ಯಮವು 3.8 ಲಕ್ಷ ಚಂದಾದಾರರೊಂದಿಗೆ ಕಳೆದ ಮೂರು ವರ್ಷಗಳಿಂದ ಜವಾಬ್ದಾರಿಯುತ ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತಿದೆ” ಎಂದು ಹೈಕೋರ್ಟ್‌ಗೆ ವಿವರಿಸಿದರು ಎಂದು ತಿಳಿದು ಬಂದಿದೆ.

ನ್ಯಾಯಾಲಯವು ಈ ವಾದವನ್ನು ಅಂಗೀಕರಿಸಿ, ಈದಿನ ಡಾಟ್ ಕಾಮ್ ಯೂಟ್ಯೂಬ್‌ ಬ್ಲಾಕ್‌ಗೆ ಕಾರಣವಾದ ಮಧ್ಯಂತರ ಆದೇಶವನ್ನು ತೆರವುಗೊಳಿಸಲು ಯೂಟ್ಯೂಬ್‌ಗೆ ಸ್ಪಷ್ಟ ನಿರ್ದೇಶನ ನೀಡಿದೆ. ಈ ಮೂಲಕ ಧರ್ಮಸ್ಥಳ ಸಂಬಂಧಿತ ಪ್ರಕರಣದಲ್ಲಿ ಮಾಧ್ಯಮದ ಪರವಾಗಿ ಮಹತ್ವದ ತಾತ್ಕಾಲಿಕ ಜಯ ದೊರೆತಿದೆ.

ಅಪರಾಧ ರಾಜ್ಯ ರಾಷ್ಟ್ರೀಯ