ಸುಳ್ಯದಲ್ಲಿ ಕೆ.ಎಸ್.ಆರ್.ಟಿ.ಸಿ  ಗುತ್ತಿಗೆ ಚಾಲಕರ ದಿಢೀರ್ ಮುಷ್ಕರದಿಂದ ಗ್ರಾಮೀಣ ರೂಟ್ ಗಳು ಬಂದ್ ಸಂಕಷ್ಟದಲ್ಲಿ ಪ್ರಯಾಣಿಕರು

ಸುಳ್ಯದಲ್ಲಿ ಕೆ.ಎಸ್.ಆರ್.ಟಿ.ಸಿ ಗುತ್ತಿಗೆ ಚಾಲಕರ ದಿಢೀರ್ ಮುಷ್ಕರದಿಂದ ಗ್ರಾಮೀಣ ರೂಟ್ ಗಳು ಬಂದ್ ಸಂಕಷ್ಟದಲ್ಲಿ ಪ್ರಯಾಣಿಕರು

ಕೆಎಸ್ಆರ್ ಟಿಸಿ ಯಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಬಸ್ಸು ಚಾಲಕರಿಗೆ ಕೆಲಸ ನಿಲ್ಲಿಸುವಂತೆ ಅವರನ್ನು ನೇಮಕ ಮಾಡಿದ ಸಂಸ್ಥೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಅತಂತ್ರವಾಗಿರುವ ಬಸ್ ಚಾಲಕರು ತಮ್ಮ ಉದ್ಯೋಗ ಭದ್ರತೆಗಾಗಿ ಸ್ಪಷ್ಟ ಆದೇಶ ನೀಡಬೇಕೆಂದು ಆಗ್ರಹಿಸಿ ಕೆಲಸ ನಿಲ್ಲಿಸಿದ್ದು, ಸುಳ್ಯ ತಾಲೂಕಿನ ಗ್ರಾಮೀಣ ಬಸ್ ರೂಟ್ ಗಳು ಸ್ಥಗಿತಗೊಂಡು ಜನರು ಸಂಕಷ್ಟಕ್ಕೆ ಒಳಗಾದ ಘಟನೆ ನಡೆದಿದೆ.

ಗ್ರಾಮೀಣ ಭಾಗದಲ್ಲಿ ಓಡಾಡುವ ಹಲವು ಬಸ್ ರೂಟ್ ಗಳಿಗೆ ಗುತ್ತಿಗೆ ಆಧಾರದಲ್ಲಿ ಚಾಲಕರನ್ನು ನೇಮಕ ಮಾಡಲಾಗಿತ್ತು. ಈ ನೇಮಕದ ಅವಧಿ ಎರಡು ವರ್ಷ ಇರುತ್ತದೆ. ಈ ನೇಮಕಾತಿಯ ಜವಾಬ್ದಾರಿಯನ್ನು ಮೈಸೂರಿನ ‘ಪನ್ನಗ’ ಎಂಬ ಸಂಸ್ಥೆಗೆ ನೀಡಲಾಗಿದ್ದು, ಸುಳ್ಯ ಡಿಪೋ ಒಂದರಲ್ಲಿ ಪನ್ನಗ ಮೂಲಕ ನೇಮಕವಾದ 35 ಮಂದಿ ಚಾಲಕರಿದ್ದಾರೆ.

ಡಿ. 30 ರಂದು ರಾತ್ರಿ ಅವರಿಗೆಲ್ಲ ಪನ್ನಗ ಸಂಸ್ಥೆ ಮೆಸೇಜ್ ಮಾಡಿ ಜನವರಿ 1ರಿಂದ ಕೆಲಸ ನಿಲ್ಲಿಸುವಂತೆ ತಿಳಿಸಿದೆ ಎನ್ನಲಾಗಿದೆ. ಬಳಿಕ ಡಿ. 31 ರಂದು ಸಂಜೆಯ ವೇಳೆಗೆ ಮತ್ತೆ ಮೆಸೇಜ್ ಮಾಡಿದ ಸಂಸ್ಥೆ ಜ. 1ರಿಂದ ಪುನಃ ಕೆಲಸ ಆರಂಭಿಸಲು ತಿಳಿಸಿದೆ. ಇದರಿಂದ ಚಾಲಕರಿಗೆ ಅಭದ್ರತೆ ಎದುರಾಗಿದ್ದು, ದಿಢೀರ್ ಮುಷ್ಕರ ಕೈಗೊಂಡಿದ್ದಾರೆ.

ಚಾಲಕರನ್ನು ಕೈಬಿಟ್ಟರೆ ಬಸ್ ಓಡಿಸಲು ಸಮಸ್ಯೆಯಾಗಿ ಪ್ರಯಾಣಿಕರಿಗೆ ಸಮಸ್ಯೆಯಾಗುವುದನ್ನು ಮನಗಂಡ ಕೆ ಎಸ್ ಆರ್ ಟಿ ಸಿ ಹಿರಿಯ ಅಧಿಕಾರಿಗಳು ಪನ್ನಗ ಸಂಸ್ಥೆಯ ಕಾಂಟ್ರಕ್ಟ್ ಅನ್ನು ನವೀಕರಿಸುವ ವ್ಯವಸ್ಥೆ ಮಾಡುವುದಾಗಿ ಪನ್ನಗ ಸಂಸ್ಥೆಗೆ ತಿಳಿಸಿದರೆನ್ನಲಾಗಿದೆ. ಆ ಬಳಿಕ ಪನ್ನಗ ಸಂಸ್ಥೆಯವರು ಚಾಲಕರಿಗೆ ಪುನಃ ಕೆಲಸಕ್ಕೆ ಹಾಜರಾಗಲು ಸೂಚನೆ ನೀಡುವ ನೀಡಿದ್ದರೆಂದು ತಿಳಿದು ಬಂದಿದೆ.

ಆದರೆ ಅತಂತ್ರ ಸೂಚನೆಗಳಿಂದ ನಮಗೆ ಕೆಲಸ ಮಾಡಲು ಕಷ್ಟವಾಗುತ್ತದೆ. ಏನಿದ್ದರೂ ಲಿಖಿತ ಆದೇಶ ಕೊಡಿ’ ಎಂದು ಆಗ್ರಹಿಸಿ ಸುಳ್ಯ ಡಿಪೋದ 35 ಮಂದಿ ಚಾಲಕರು ಕೂಡ ದಿಡೀರ್ ಮುಷ್ಕರಕ್ಕೆ ನಿರ್ಧರಿಸಿದರು.

ನಿನ್ನೆ ಸಂಜೆ ತಾಲೂಕಿನ ಗ್ರಾಮಾಂತರ ಪ್ರದೇಶಕ್ಕೆ ಹೋಗಬೇಕಾದ ಮೂರು ರೂಟ್ಗಳಲ್ಲಿ ಬಸ್ ಓಡಿಸದೆ ಕುಳಿತರು. ನಂತರ ಡಿಪೋ ಅಧಿಕಾರಿಗಳು ಕೆ ಎಸ್ ಆರ್ ಟಿ ಸಿ ಯ ಖಾಯಂ ಡ್ರೈವರ್ ಗಳು ಮತ್ತು ಕಂಡಕ್ಟರ್ ಗಳ ಸಹಕಾರ ಪಡೆದು ಕೆಲವು ರೂಟ್ ಗೆ ಬಸ್ ಓಡಿಸಿದ್ದಾರೆ.

ಇಂದು(ಜ.1) ಪನ್ನಗದಿಂದ ನೇಮಿತರಾದ ಚಾಲಕರು ಕೆಲಸಕ್ಕೆ ಬಂದಿಲ್ಲ. ಇದರಿಂದ ಸುಳ್ಯ ತಾಲೂಕಿನ ಗ್ರಾಮೀಣ ಪ್ರದೇಶಕ್ಕೆ ಬಸ್ ಹೋಗಲಾಗದೆ ವಿದ್ಯಾರ್ಥಿಗಳು ಮತ್ತು ಇತರ ಪ್ರಯಾಣಿಕರು ಸಂಕಷ್ಟ ಅನುಭವಿಸಿದ್ದಾರೆ.

ರಾಜ್ಯ