ವರ್ಷ ಕಳೆದರೂ ವಿದೇಶದಲ್ಲಿ ಇನ್ನೂ ಬಂಧನದಲ್ಲಿರುವ ಕಡಬದ ಯುವಕ:

ವರ್ಷ ಕಳೆದರೂ ವಿದೇಶದಲ್ಲಿ ಇನ್ನೂ ಬಂಧನದಲ್ಲಿರುವ ಕಡಬದ ಯುವಕ:

ಹ್ಯಾಕರ್ ಗಳ ಕೈಗೆ ಸಿಲುಕಿ ವಿದೇಶದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರೋ ಮಂಗಳೂರಿನ ವ್ಯಕ್ತಿಯನ್ನ ಕೇಂದ್ರ ಮತ್ತು ರಾಜ್ಯ ಸರ್ಕಾರ ಬಿಡುಗಡೆಗೊಳಿಸುವಂತೆ ದ‌.ಕ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸಿ ಬಳಿಕ ಸಂಸದ ‌ನಳೀನ್ ಕುಮಾರ್ ಕಟೀಲ್ ಭರವಸೆ ನೀಡಿದರಾದರೂ ಯುವಕ ಇನ್ನೂ ಊರಿಗೆ ಮರುಳದೆ ಮನೆಯವರು ಆತಂಕದಲ್ಲಿದ್ದಾರೆ. ದ.ಕ ಜಿಲ್ಲೆಯ ಕಡಬ ತಾಲೂಕು ಐತ್ತೂರು ಗ್ರಾಮದ ಮೂಜೂರು ದಿ.ಕೆಂಚಪ್ಪ ಗೌಡ ಮತ್ತು ಹೇಮಾವತಿ ದಂಪತಿ ಪುತ್ರ ಚಂದ್ರಶೇಖರ ಎಮ್.ಕೆ ರಿಯಾದ್ ನಲ್ಲಿರುವ ಅಲ್ಮಾನರ್ ಸೆರಾಮಿಕ್ಸ್ ಎಂಬ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು.
ಆದರೆ ಯಾವುದೋ ಹ್ಯಾಕರ್ ಗಳ ಸುಳಿಗೆ ಸಿಲುಕಿ ನಿರಾಪರಾದಿಯಾದ ಅವರು, 2022 ರ ನವೆಂಬರ್ ನಿಂದ ಬಂಧಿತರಾಗಿ ಜೈಲಿನಲ್ಲಿ ನರಳುತ್ತಿದ್ದಾರೆ. ಚಂದ್ರಶೇಖರ್ ಕಳೆದ ವರ್ಷ ಮೊಬೈಲ್ ಮತ್ತು ಸಿಮ್‌ ಖರೀದಿಗಾಗಿ ರಿಯಾದ್‌ ನ ಅಂಗಡಿಯೊಂದಕ್ಕೆ ಭೇಟಿ ನೀಡಿದಾಗ ಇವರಿಂದ 2 ಬಾರಿ ತಂಬನ್ನು (ಬೆರಳಚ್ಚು) ಪಡೆದಿದ್ದಾರೆ. ಒಂದು ವಾರದ ಬಳಿಕ ‘ಆ ದೂರವಾಣಿ ಸಂಖ್ಯೆಗೆ ಅರಬಿಕ್ ಭಾಷೆಯಲ್ಲಿ ಸಂದೇಶವೊಂದು ಬಂದಿದ್ದು, ಅದನ್ನು ಕ್ಲಿಕ್ ಮಾಡಿ ನೋಡಿದ್ದಾರೆ.
ಈ ಸಂಬಂಧವಾಗಿ ಎರಡು ದಿನ ಬಳಿಕ ದೂರವಾಣಿ ಕರೆಯೊಂದು ಬಂದು ಸಿಮ್ ನ ಬಗ್ಗೆ ಮಾಹಿತಿಯನ್ನು ಕೇಳಿದ್ದು, ಈಗ ಬರುವ ಓ.ಟಿ.ಪಿ ಸಂಖ್ಯೆಯನ್ನು ತಿಳಿಸುವಂತೆ ಹೇಳುತ್ತಾರೆ. ಅಮಾಯಕನಾಗಿರುವ ಇವರು ಓ.ಟಿ.ಪಿ ಯನ್ನು ತಿಳಿಸಿರುತ್ತಾರೆ.
2023 ರ ಜನವರಿಯಲ್ಲಿ ರಿಯಾದ್ ಪೊಲೀಸರು ಅವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಜೈಲುವಾಸಿಯಾಗಲು ಕಾರಣ:

ಚಂದ್ರಶೇಖರ್ ಗೆ ತಿಳಿಯದಂತೆ ಅಲ್ಲಿ ಕಡಬದ ಚಂದ್ರಶೇಖರ್ ಹೆಸರಲ್ಲಿ ಬ್ಯಾಂಕ್ ವೊಂದರಲ್ಲಿ ಅಕೌಂಟ್ ತರೆದಿದ್ದು, ಆ ದೇಶದ ಮಹಿಳೆಯೊಬ್ಬರ 22 ಸಾವಿರ ರಿಯಲ್ ಈ ಖಾತೆಗೆ ಜಮೆಯಾಗಿ ಬೇರೆ ಕಡೆಗೆ ವರ್ಗಾವಣೆಯಾಗಿತ್ತು.
ಹಣ ಕಳೆದುಕೊಂಡ ಮಹಿಳೆ ಚಂದ್ರಶೇಖರ್ ಖಾತೆಗೆ ಜಮೆಯಾಗಿರುವುದನ್ನು ಗಮನಿಸಿ ಚಂದ್ರಶೇಖರ್ ಮೇಲೆ ದೂರು ನೀಡಿದ ಕಾರಣ ಅವರು ಜೈಲು ಪಾಲಾಗಿದ್ದಾರೆ.ಬಳಿಕದ ಬೆಳವಣಿಗೆಯಲ್ಲಿ ಸಂಸದ ನಳೀನ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಯುವಕನನ್ನು ತವರಿಗೆ ಕರೆತರುವ ಬಗ್ಗೆ ಯುವಕನ ಮನೆಯವರಿಗೆ ಭರವಸೆ ನೀಡಿದ್ದರು ಆದರೂ ಇಷ್ಟರವರೆಗೂ ಯುವಕನ ವಿವರ ತಿಳಿಯದೆ ಮನೆಯವರು ಹತಾಶೆಯಾಗಿದ್ದು ಮಗನ ಬಗ್ಗೆ ಆತಂಕದಲ್ಲಿದ್ದಾರೆ.

ರಾಜ್ಯ