KSRTC ನೌಕರ ಆತ್ಮಹತ್ಯೆ ಯತ್ನ : ಮಡಿಕೇರಿ ಡಿಪೋ ನೌಕರರ ಪ್ರತಿಭಟನೆ

KSRTC ನೌಕರ ಆತ್ಮಹತ್ಯೆ ಯತ್ನ : ಮಡಿಕೇರಿ ಡಿಪೋ ನೌಕರರ ಪ್ರತಿಭಟನೆ

ಮಡಿಕೇರಿ ಆ.30 : ಕೆಎಸ್‌ಆರ್‌ಟಿಸಿ ಮಡಿಕೇರಿ ಡಿಪೋ ಘಟಕದ ವ್ಯವಸ್ಥಾಪಕಿಯ ಕಿರುಕುಳದಿಂದ ಸಿಬ್ಬಂದಿ ಅಭಿಷೇಕ್ ಎಂಬುವವರು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿ ಮತ್ತು ಇವರನ್ನು ತಕ್ಷಣ ಅಮಾನತುಗೊಳಿಸಬೇಕೆಂದು ಒತ್ತಾಯಿಸಿ ನೌಕರರು ಪ್ರತಿಭಟನೆ ನಡೆಸಿದರು.
ನಗರದ ಡಿಪೋದಲ್ಲಿ ಪ್ರತಿಭಟನೆ ನಡೆಸಿದ ನೌಕರರು, ಅಧಿಕಾರಿಯ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಮಡಿಕೇರಿ ಡಿಪೋದಲ್ಲಿ ಬಸ್‍ಗಳನ್ನು ಸ್ವಚ್ಛ ಮಾಡಲು ಯಂತ್ರಗಳಿವೆ. ಇದಕ್ಕಾಗಿಯೇ ಲಕ್ಷಾಂತರ ರೂ.ಗಳನ್ನು ಇಲಾಖೆಯಿಂದ ವ್ಯಯಿಸಲಾಗುತ್ತಿದೆ. ಹೀಗಿದ್ದರೂ ಸಿಬ್ಬಂದಿಗಳ ಕೈಯಿಂದಲೇ ಬಸ್ ನ್ನು ಸ್ವಚ್ಚಗೊಳಿಸಲಾಗುತ್ತಿದೆ. ಹೆಚ್ಚುವರಿಯಾಗಿ ಮಾಡಿದ ಕೆಲಸಕ್ಕೆ ಹೆಚ್ಚುವರಿ ಸಂಬಳ ನೀಡುತ್ತಿಲ್ಲ. ಈ ಅವ್ಯವಸ್ಥೆ ಕೇವಲ ಪುತ್ತೂರು ಡಿಪೋ ವಿಭಾಗಗಳಲ್ಲಿ ಹೆಚ್ಚು ಕಂಡು ಬರುತ್ತಿದೆ ಎಂದು ಆರೋಪಿಸಿದರು.
ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಪುತ್ತೂರು ಡಿಪೋ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ಅವರಿಗೆ ನೀಡಿದರು.
ಕೆಎಸ್‍ಆರ್‍ಟಿಸಿ ನೌಕರರ ಸಂಘದ ರಾಜ್ಯಾಧ್ಯಕ್ಷ ಜಗದೀಶ್ ಮಾತನಾಡಿ ಬೆಂಗಳೂರು ಕೇಂದ್ರ ಕಚೇರಿಯ ಅಧಿಕಾರಿಗಳು ಮಡಿಕೇರಿ ಡಿಪೋ ವ್ಯವಸ್ಥಾಪಕಿಯನ್ನು ವರ್ಗಾವಣೆ ಮಾಡಿದ್ದಾರೆ. ಪ್ರಕರಣದ ತನಿಖಾ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಮಡಿಕೇರಿ ಡಿಪೋದಲ್ಲಿ ಸಿಬ್ಬಂದಿಗಳ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎನ್ನುವ ಆರೋಪವಿದೆ. ವಿಭಾಗೀಯ ನಿಯಂತ್ರಕರು ಇದಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದರು.
ಪುತ್ತೂರು ಡಿಪೋ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ಮಾತನಾಡಿ, ಕೆ.ಎಸ್.ಆರ್.ಟಿ.ಸಿ. ನೌಕರರ ಸಂಘದ ರಾಜ್ಯಾಧ್ಯಕ್ಷರು ಹಾಗೂ ಪದಾಧಿಕಾರಿಗಳ ಜೊತೆಯಲ್ಲಿ ಸೌಹಾರ್ಧಯುತವಾಗಿ ಚರ್ಚೆ ನಡೆಸಲಾಗಿದೆ. ಈ ವೇಳೆ ಕೆಲವೊಂದು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ತನ್ನ ಕಾರ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲಾ ಬೇಡಿಕೆಗಳನ್ನು ಈಡೇರಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಮಡಿಕೇರಿ ಡಿಪೋ ವ್ಯವಸ್ಥಾಪಕರನ್ನು ರಾಮನಾಥಪುರಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ಹೇಳಿದರು. ಪ್ರತಿಭಟನೆಯ ಸಂದರ್ಭ ನಗರ ಪೊಲೀಸರು ಬಂದೋಬಸ್ತ್ ಕಲ್ಪಿಸಿದ್ದರು.

ರಾಜ್ಯ