
ಭಾರತೀಯ ದಂಡ ಸಂಹಿತೆ (ಐಪಿಸಿ), ದಂಡ ಪ್ರಕ್ರಿಯಾ ಸಂಹಿತೆ ಭಾರತ ಸಾಕ್ಷ್ಯ ಅಧಿನಿಯಮಕ್ಕೆ ಬದಲಾಗಿ ಹೊಸ ಕಾನೂನು ರೂಪಿಸುವ ಮಸೂದೆಯನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಶುಕ್ರವಾರ(ಆಗಸ್ಟ್ 11) ಮಂಡಿಸಿದೆ.1860ರ ಭಾರತೀಯ ದಂಡ ಸಂಹಿತೆ (ಐಪಿಸಿ), ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಮತ್ತು ಭಾರತೀಯ ಪುರಾವೆ ಕಾಯ್ದೆಗಳನ್ನು ಬದಲಿಸುವ ಮಸೂದೆಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ಮಂಡಿಸಿದರು.



ಹೊಸ ವಿಧೇಯಕಗಳೊಂದಿಗೆ ಸರ್ಕಾರವು ‘ನ್ಯಾಯದಾನವನ್ನು ಖಾತರಿಪಡಿಸುವ ಗುರಿ ಹೊಂದಿದೆಯೇ ವಿನಾ, ಶಿಕ್ಷೆಯನ್ನಲ್ಲ’ ಎಂದು ಗೃಹ ಸಚಿವ ತಿಳಿಸಿದರು.
ಹೊಸ ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತಾ 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ 2023 ಮತ್ತು ಭಾರತೀಯ ಸಾಕ್ಷ್ಯ ಮಸೂದೆ 2023 ಅನ್ನು ಹೆಚ್ಚಿನ ಪರಿಶೀಲನೆಗಾಗಿ ಸಂಸದೀಯ ಸಮಿತಿಗೆ ಕಳುಹಿಸಲಾಗುವುದು ಎಂದು ಅಮಿತ್ ಶಾ ಹೇಳಿದರು.
“ಹಾಲಿ ಇರುವ ಕಾನೂನುಗಳು ಬ್ರಿಟಿಷ್ ಆಡಳಿತವನ್ನು ರಕ್ಷಿಸುವ ಮತ್ತು ಬಲಪಡಿಸುವ ನಿಟ್ಟಿನಲ್ಲಿ ಗಮನ ಹರಿಸಿದ್ದವು. ಇದರಲ್ಲಿ ಶಿಕ್ಷೆ ನೀಡುವುದೇ ಮುಖ್ಯ ಗುರಿಯಾಗಿದ್ದು, ನ್ಯಾಯದಾನಕ್ಕೆ ಆದ್ಯತೆ ಇರಲಿಲ್ಲ. ಅವುಗಳನ್ನು ಬದಲಿಸುವ ಮೂಲಕ ಮೂರು ಹೊಸ ಕಾನೂನುಗಳು ಭಾರತೀಯ ನಾಗರಿಕರ ಹಕ್ಕುಗಳನ್ನು ಕಾಪಾಡುವ ಉತ್ಸಾಹ ತರಲಿದೆ” ಎಂದು ಅಮಿತ್ ಶಾ ತಿಳಿಸಿದ್ದಾರೆ.
ನೂತನ ವಿಧೇಯಕಗಳ ಉದ್ದೇಶವು ಶಿಕ್ಷೆ ವಿಧಿಸುವುದಲ್ಲ. ಅವು ನ್ಯಾಯ ಒದಗಿಸುತ್ತವೆ ಎಂದ ಶಾ, “ಅಪರಾಧ ತಡೆಯುವ ಭಾವನೆಯ ಸೃಷ್ಟಿಗಾಗಿ ಶಿಕ್ಷೆ ನೀಡಲಾಗುತ್ತದೆ” ಎಂದರು.
ದೇಶದ್ರೋಹ ಕಾನೂನನ್ನು ರದ್ದುಪಡಿಸಲಾಗುವುದು ಎಂದು ಗೃಹ ಸಚಿವರು ಪ್ರಕಟಿಸಿದ್ದಾರೆ. ಪ್ರಸ್ತಾವಿತ ಕಾನೂನಿನಲ್ಲಿ ‘ದೇಶದ್ರೋಹ’ ಎಂಬ ಪದ ಇಲ್ಲ. ಅದನ್ನು ಭಾರತದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರೆಗೆ ಅಪಾಯ ತಂದೊಡ್ಡುವ ಕೃತ್ಯಗಳಿಗಾಗಿ ಸೆಕ್ಷನ್ 150 ಅನ್ನು ದೇಶದ್ರೋಹದ ಕಾನೂನಿನ ಬದಲಿಗೆ ಜಾರಿಗೆ ತರಲಾಗುತ್ತಿದೆ.
ಹೊಸ ನಿಯಮದಲ್ಲಿ ಇದೇ ಮೊದಲ ಬಾರಿಗೆ ಶಿಕ್ಷೆಯಾಗಿ ಸಮುದಾಯ ಸೇವೆಯನ್ನು ಸೇರ್ಪಡೆ ಮಾಡಲಾಗಿದೆ. ತನಿಖೆಯಲ್ಲಿ ತಂತ್ರಜ್ಞಾನ ಹಾಗೂ ಫೊರೆನ್ಸಿಕ್ ವಿಜ್ಞಾನದ ಬಳಕೆ, ಎಲೆಕ್ಟ್ರಾನಿಕ್ ವಿಧದಲ್ಲಿ ಸಮನ್ಸ್ ಜಾರಿ ಮಾಡುವುದು ಹಾಗೂ ಎಲೆಕ್ಟ್ರಾನಿಕ್ ಹಾಗೂ ಡಿಜಿಟಲ್ ದಾಖಲೆಗಳನ್ನು ಸಾಕ್ಷ್ಯವನ್ನಾಗಿ ಪರಿಗಣಿಸುವ ಅವಕಾಶ ಇದೆ.
ಹೊಸ ಕಾನೂನಿನ ಅನ್ವಯ ಚುನಾವಣಾ ಸಂದರ್ಭದಲ್ಲಿ ಮತದಾರರಿಗೆ ಲಂಚ ನೀಡಿದರೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ. ಇತರ ಪ್ರಸ್ತಾವಿತ ಶಿಕ್ಷೆಗಳಲ್ಲಿ ಸಾಮೂಹಿಕ ಅತ್ಯಾಚಾರಕ್ಕಾಗಿ 20 ವರ್ಷಗಳ ಜೈಲು ಶಿಕ್ಷೆಯಿಂದ ಜೀವಾವಧಿ ಶಿಕ್ಷೆ, ಮತ್ತು ಅಪ್ರಾಪ್ತ ವಯಸ್ಸಿನ ಅತ್ಯಾಚಾರಕ್ಕಾಗಿ ಮರಣದಂಡನೆ ಸೇರಿವೆ.