
ನಮ್ಮ ತೆರಿಗೆ ಹಣದಲ್ಲಿ ಸಂಬಳ ಪಡೆದು, ಸೌಜನ್ಯಳ ಅತ್ಯಾಚಾರ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿರುವ ಸರ್ಕಾರ ಮತ್ತು ಪೊಲೀಸ್ ಅಧಿಕಾರಿಗಳಿಗೆ ಧಿಕ್ಕಾರ. ಸೌಜನ್ಯ ಪ್ರಕರಣವನ್ನು ಮುಚ್ಚಿಹಾಕಿ, ಅಪರಾಧಿಗಳನ್ನು ರಕ್ಷಿಸುತ್ತಿರುವವರಿಗೆ ನಮ್ಮ ಶಾಪ ತಟ್ಟುತ್ತದೆ ಎಂದು ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಸೌಜನ್ಯ ಪ್ರಕರಣವನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದಿಂದ ಮರು ತನಿಖೆ ನಡೆಸಬೇಕೆಂದು ಒತ್ತಾಯಿಸಿ 60ಕ್ಕೂ ಹೆಚ್ಚು ಸಂಘಟನೆಗಳ ಒಕ್ಕೂಟವು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದೆ. ಪ್ರತಿಭಟನೆಯಲ್ಲಿ ತಿಮರೋಡಿ ಮಾತನಾಡಿದರು.
“ಪ್ರಕರಣದ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯವು ತನಿಖಾಧಿಕಾರಿಗಳು ಆರೋಪಿಯೆಂದು ಬಂಧಿಸಿದ್ದ ಅಮಾಯಕನನ್ನು ನಿರಪರಾಧಿಯೆಂದು ಘೋಷಿಸಿ, ಖುಲಾಸೆಗೊಳಿಸಿದೆ. ಅಲ್ಲದೆ, ‘ಪ್ರಕರಣದ ತನಿಖೆಯು ಲೋಪಗಳಿಂದ ಕೂಡಿದ್ದು, ಮರು ತನಿಖೆಗೆ ಅರ್ಹವಾಗಿದೆ’ ಎಂದೂ ಹೇಳಿದೆ. ನ್ಯಾಯಾಲಯವೇ ಹೇಳುವಂತೆ ಪ್ರಕರಣವನ್ನು ಸಿಬಿಐ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸಿಲ್ಲ. ಹೀಗಾಗಿ, ಪ್ರಕರಣವನ್ನು ಎಸ್‌ಐಟಿ ಮೂಲಕ ಮರುತನಿಖೆ ನಡೆಸಬೇಕು” ಎಂದು ಒತ್ತಾಯಿಸಿದರು.
“ತನಿಖೆಯನ್ನು ನ್ಯಾಯಾಂಗದ ನೇರ ಮೇಲ್ವಿಚಾರಣೆಯಲ್ಲಿ ನಡೆಸಬೇಕು. ನೈಜ ಅಪರಾಧಿಗಳು ಮತ್ತು ಅವರ ರಕ್ಷಕರು ಧರ್ಮಸ್ಥಳದಲ್ಲಿ ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಅವರನ್ನು ಬಂಧಿಸಬೇಕು. ವಿಚಾರಣೆಗೆ ಒಳಪಡಿಸಿ, ಶಿಕ್ಷೆ ವಿಧಿಸಬೇಕು” ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಸಿಎಐಟಿಯು ಮುಖಂಡ ಪ್ರಕಾಶ್, “ನಮ್ಮ ಅಳತೆಗೂ ಮೀರಿದ ಸಮಸ್ಯೆಗಳು ಸೌಜನ್ಯ ಪ್ರಕರಣವನ್ನು ಸುತ್ತುವರಿದಿವೆ. ಸರ್ಕಾರದ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಯಿಂದ ಧರ್ಮಸ್ಥಳದ ಆದಾಯ ಹೆಚ್ಚಿದೆ. ಅದನ್ನು ಸಂಭ್ರಮಿಸಿ ಧರ್ಮಸ್ಥಳದ ಹೆಗ್ಗಡೆ ಮುಖ್ಯ ಮಂತ್ರಿಗಳಿಗೆ ದೀರ್ಘ ಪತ್ರ ಬರೆದಿದ್ದಾರೆ. ಬಿಜೆಪಿಯು ಅವರನ್ನು ರಾಜ್ಯ ಸಭೆ ಸದಸ್ಯ ಮಾಡಿದೆ. ಇದರ ಜೊತೆಗೆ ಧರ್ಮಸ್ಥಳದ ಮೈಕ್ರೊ ಫೈನಾನ್ಸ್ ಯೋಜನೆ ರಾಜ್ಯಾದ್ಯಂತ ಮಹಿಳೆಯರನ್ನು ಸಾಲದ ಬಲೆಯೊಳಗೆ ಸಿಲುಕಿಸಿದೆ. ಇಂತಹ ರಾಜಕೀಯ ಪರಿಸ್ಥಿತಿಯಲ್ಲಿ ನಾವು ಸೌಜನ್ಯಳ ದಾರುಣ ಸಾವಿಗೆ ಹೊಣೆಗಾರರನ್ನು ಹುಡುಕುತ್ತಿದ್ದೇವೆ” ಎಂದರು.
ಪ್ರಾಂತ ರೈತ ಸಂಘದ ಮುಖಂಡ ಯಶವಂತ ಮಾತನಾಡಿ, “ಸೌಜನ್ಯ ಪ್ರಕರಣದ ಹೆಸರಿನಲ್ಲಿ ಧರ್ಮಸ್ಥಳಕ್ಕೆ, ವೀರೇಂದ್ರ ಹೆಗ್ಗಡೆ ಅವರಿಗೆ ಅವಹೇಳನ ಮಾಡುವಂತಹ ಮಾತುಗಳನ್ನು ಯಾರೂ ಆಡಬಾರದು, ಪ್ರಕಟಿಸಬಾರದು ಎಂದು ನ್ಯಾಯಾಲಯದಲ್ಲಿ ತಡೆ ಆಜ್ಞೆ ತರಲಾಗಿದೆ. ಇದರ ಅರ್ಥ ಜನರ ಧರಣಿ ಚಳವಳಿಗಳಿಗೆ ಅಪಾರವಾದ ಶಕ್ತಿ ಇದೆ. ಅದು ಎಲ್ಲರನ್ನೂ ಎಚ್ಚರಿಸುತ್ತದೆ, ಅಪರಾಧಿಗಳಿಗೆ ಹೆದರಿಕೆ ಹುಟ್ಟಿಸುತ್ತದೆ. ಧರಣಿ, ಪ್ರತಿಭಟನೆ, ಚಳವಳಿ ನಿರಂರತವಾಗಿರಲಿ” ಎಂದರು.
“ಮಹಿಳೆಯರ ಮೇಲೆ ನಿರಂತರವಾದ, ಅಮಾನುಷವಾದ ಹಿಂಸೆ, ದೌರ್ಜನ್ಯ ಗಳು ನಡೆಯುತ್ತಿವೆ. ಇಂತಹ ಕಾಲದಲ್ಲಿ ಸರ್ಕಾರಗಳು ನಿಷ್ಪಕ್ಷಪಾತವಾಗಿ ಕ್ರಮ ಕೈಗೊಳ್ಳುವ ಮೂಲಕ ಮಹಿಳೆಯರಲ್ಲಿ ಬದುಕಿನ ಬಗ್ಗೆ ಭರವಸೆ ಮೂಡಿಸಬೇಕು. ಇಲ್ಲವಾದರೆ ಇಡೀ ಮಹಿಳಾ ಸಮೂಹ ಭರವಸೆಯೇ ಇಲ್ಲದೆ ತತ್ತರಿಸಿಹೋಗುತ್ತದೆ” ಎಂದು ಎನ್‌ಎಫ್‌ಐಡಬ್ಲ್ಯೂ ಸಂಘಟನೆಯ ಎ. ಜ್ಯೋತಿ ಹೇಳಿದರು