
ಸುಳ್ಯ ಮಾರ್ಚ್ 27: ರಿಕಾಲಿಂಗ್ ಅಮರ ಸುಳ್ಯ ಪುಸ್ತಕದ ಲೇಖಕ ಅನಿಂದಿತ್ ಗೌಡ ಅವರ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೂ, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಗುರುತಿಸಿಕೊಂಡ ಅಮರ ಸುಳ್ಯ ಮಹಾಕ್ರಾಂತಿಗೂ ಇರುವ ಅವಿನಾಭಾವ ಸಂಬಂಧವನ್ನು ತಿಳಿಸುವ ‘ ಪುತ್ತೂರಿನಲ್ಲಿ ಅಂದು ನಡೆದದ್ದು ಏನು ‘ ಎನ್ನುವ ಇ-ಪುಸ್ತಕ ಬಿಡುಗಡೆ ಮಾರ್ಚ್ 30 ರಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ ಎಂದು ಯುವ ಲೇಖಕ ಅನಿಂದಿತ್ ಗೌಡ ಕೊಚ್ಚಿ ಮರಿಕೆ ಹೇಳಿದರು.
ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ದಾಖಲೆಗಳ ಪ್ರಕಾರ ದೇಶದ ಮೊದಲ ಸ್ವಾತಂತ್ರ್ಯ ಹೋರಾಟ ಎಂದು ಗುರುತಿಸಿಕೊಂಡಿರುವ ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆದ ಅಮರ ಸುಳ್ಯ ಹೋರಾಟಕ್ಕೆ ಮೊದಲು ಹೋರಾಟಗಾರರು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಸೇರಿ ಸಭೆ ನಡೆಸಿದ್ದರು ಎನ್ನುವ ವಿಚಾರ ಬ್ರಿಟಿಷ್ ದಾಖಲೆಯಿಂದ ತಿಳಿದುಬಂದಿದೆ ಎಂದ ಅವರು ದೇವಸ್ಥಾನದ ಗದ್ದೆಯಲ್ಲಿ ಆ ದಿನ ನಡೆದ ವಿಚಾರಗಳನ್ನು ಪುಸ್ತಕದಲ್ಲಿ ನಮೂದಿಸುವ ಪ್ರಯತ್ನವನ್ನು ನಡೆಸಿರುವುದಾಗಿ ಅವರು ತಿಳಿಸಿದರು.
ಎಲ್ಲಾ ದಾಖಲೆಗಳನ್ನು ಕನ್ನಡದಲ್ಲಿ ಅನುವಾದ ಮಾಡಿದ ಕಿರು ಇ-ಪುಸ್ತಕವನ್ನು ಮಾರ್ಚ್ 30 ರಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಪೂಜೆ ನೆರವೇರುವ ಸಮಯದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಬಿಡುಗಡೆಯಾಗಲಿದೆ ಎಂದರು

