
ಮಂಗಳೂರು ಜನವರಿ 29: ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮ್ಮ ಮುಂಬರುವ ಸಿನೆಮಾ ಜೈಲರ್ ಶೂಟಿಂಗ್ ಗಾಗಿ ಮಂಗಳೂರಿಗೆ ಆಗಮಿಸಿದ್ದಾರೆ.
ಅವರ ಮುಖ್ಯಭೂಮಿಕೆಯ ಜೈಲರ್ ಸಿನಿಮಾದ ಶೂಟಿಂಗ್ ಎರಡು ದಿನಗಳ ಕಾಲ ಮಂಗಳೂರಿನಲ್ಲಿ ನಡೆಯಲಿದ್ದು, ಈ ಭಾಗದ ಚಿತ್ರೀಕರಣಕ್ಕಾಗಿ ಅವರು ತಮ್ಮ ತಂಡದೊಂದಿಗೆ ಕರಾವಳಿಗೆ ಪಾದ ಬೆಳೆಸಿದ್ದಾರೆ. ಕರಾವಳಿಯ ಹಲವು ಭಾಗಗಳಲ್ಲಿ ‘ಜೈಲರ್’ ಸಿನಿಮಾದ ಕೆಲ ದೃಶ್ಯಗಳನ್ನು ಸೆರೆ ಹಿಡಿಯಲಾಗುತ್ತಿದೆ ಎನ್ನುವುದು ಸದ್ಯಕ್ಕೆ ಸಿಕ್ಕಿರುವ ಮಾಹಿತಿ.
ಈ ಸನ್ನಿವೇಶದಲ್ಲಿ ನಟ ಶಿವರಾಜ್ ಕುಮಾರ್ (Shivraj Kumar) ಕೂಡ ಭಾಗಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಜೈಲರ್ ಸಿನಿಮಾದಲ್ಲಿ ರಜನಿಕಾಂತ್ ಜೊತೆ ಶಿವರಾಜ್ ಕುಮಾರ್ ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದು, ಮಂಗಳೂರು ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆಯೇ ಅಭಿಮಾನಿಗಳ ದಂಡೇ ನಟನನ್ನು ಸುತ್ತುವರೆದಿದೆ. ಹೀಗಾಗಿ ಶೂಟಿಂಗ್ ನಡೆಯುವ ಸ್ಥಳಗಳಲ್ಲಿ ಭಾರೀ ಬಿಗಿಭದ್ರತೆ ಕಲ್ಪಿಸಲಾಗುತ್ತಿದೆ.

