
ಪುತ್ತೂರು: ವಿದ್ಯಾರ್ಥಿ ವೇತನ ಪಾವತಿಸದೆ ಸತಾಯಿಸುತ್ತಿರುವ ಕೇಂದ್ರ ಹಾಗು ರಾಜ್ಯ ಸರಕಾರದ ವಿರುದ್ಧ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (NSUI) ಡಿಸೆಂಬರ್ 17 ರಂದು ರಾಜ್ಯದಾದ್ಯಂತ ಕಾಲೇಜು ಬಂದ್ ಮಾಡಿ ಪ್ರತಿಭಟನೆ ನಡೆಸಲಿದೆ ಎಂದು ಎನ್.ಎಸ್.ಯು.ಐ ರಾಜ್ಯ ಉಪಾಧ್ಯಕ್ಷ ಫಾರೂಕು ಬಯಬ್ಬೆ ಹೇಳಿದರು.ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 2022-23 ರ ಸಾಲಿನ ಪ್ರೀ ಮೆಟ್ರಿಕ್ ಹಾಗು ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿ ವೇತನವನ್ನು ಎನ್.ಎಸ್.ಪಿ ವಿದ್ಯಾರ್ಥಿ ವೇತನ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲಾಗಿದ್ದರೂ, ಇದುವರೆಗೆ ಯಾವೊಬ್ಬ ವಿದ್ಯಾರ್ಥಿಗೂ ವಿದ್ಯಾರ್ಥಿ ವೇತನ ಸಂದಾಯವಾಗಿಲ್ಲ. ಇದರಿಂದಾಗಿ ಹಲವು ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಬೇಕಾದ ಅನಿವಾರ್ಯ ಪರಿಸ್ಥಿತಿಯೂ ನಿರ್ಮಾಣಗೊಂಡಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ಏಕಾಏಕಿ ತಡೆಹಿಡಿದು, ಕಾಲೇಜಿನ ಪ್ರವೇಶ ಶುಲ್ಕವನ್ನು ಹೆಚ್ಚು ಮಾಡಲಾಗಿದೆ. ರಾಜ್ಯ ಸರಕಾರ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ ಭರವಸೆ ನೀಡಿದ್ದರೂ, ಈ ತನಕ ಇದರ ಬಗ್ಗೆ ಕ್ರಮ ಕೈಗೊಳ್ಳಲಾಗಿಲ್ಲ. ಈಗಾಗಲೇ ಪದವಿ ಪರೀಕ್ಷೆ ಮುಗಿದು 8 ತಿಂಗಳು ಕಳೆದರೂ ಫಲಿತಾಂಶವನ್ನು ಪ್ರಕಟಿಸದೆ,ಮುಂದಿನ ಸೆಮಿಸ್ಟರ್ ಓದುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದರೂ ರಾಜ್ಯ ಸರಕಾರ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುತ್ತಿದೆ. ಇ ಎಲ್ಲಾ ವೈಫಲ್ಯಗಳನ್ನು ಮುಂದಿಟ್ಟುಕೊಂಡು ರಾಜ್ಯದ ಎಲ್ಲಾ ಕಾಲೇಜುಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದರು. ವಿದ್ಯಾರ್ಥಿಗಳು ಮತ್ತು ಕಾಲೇಜು ಮಂಡಳಿಗಳು ಎನ್.ಎಸ್.ಯು.ಐ ನ ಈ ಪ್ರತಿಭಟನೆಗೆ ಬೆಂಬಲ ನೀಡಬೇಕೆಂದೂ ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.



